ಮಡಿಕೇರಿ, ಮಾ. 24: ಇತ್ತೀಚಿನ ದಿನಗಳಲ್ಲಿ ಆನ್‍ಲೈನ್ ಮೂಲಕ ಗ್ರಾಹಕ ವ್ಯವಹಾರಗಳು ನಡೆಯುತ್ತಿದ್ದು, ಎಷ್ಟೇ ತಾಂತ್ರಿಕತೆ ಮುಂದುವರೆದರೂ ಸಹ ಗ್ರಾಹಕರು ಮೋಸ ಹೋಗುವದು ತಪ್ಪುತ್ತಿಲ್ಲ. ಆದ್ದರಿಂದ ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವದು ಅತ್ಯಗತ್ಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಅವರು ಸಲಹೆ ಮಾಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲಭವನದಲ್ಲಿ ನಡೆದ ‘ವಿಶ್ವ ಗ್ರಾಹಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿನ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರಾಗಿದ್ದು, ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ವ್ಯವಹಾರ ಮಾಡುತ್ತಾರೆ. ಪದಾರ್ಥದ ಗುಣಮಟ್ಟ, ಬೆಲೆ, ಬಳಕೆಯಾಗುವ ಅವಧಿ ಮತ್ತಿತರವನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಸಲಹೆ ಮಾಡಿದರು.

ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷÀ ವಿ.ಎ.ಪಾಟೀಲ ಅವರು ಮಾತನಾಡಿ, ಗ್ರಾಹಕರಿಗಾಗಿ ಹಲವು ಹಕ್ಕುಗಳಿದ್ದು, ಗ್ರಾಹಕರು ಕೊಂಡುಕೊಳ್ಳುವ ಮತ್ತು ಪದಾರ್ಥಗಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕಿದೆ. ಪದಾರ್ಥಗಳ ಬಗ್ಗೆ ಮಾಹಿತಿ ಪಡೆಯುವ ಮತ್ತು ಕೇಳುವ ಹಕ್ಕು ಮತ್ತು ಕುಂದುಕೊರತೆಯನ್ನು ನಿವಾರಿಸಿಕೊಳ್ಳುವ ಹಕ್ಕು ಗ್ರಾಹಕರಿಗೆ ಇದೆ. ಆ ನಿಟ್ಟಿನಲ್ಲಿ ಗ್ರಾಹಕರು ಶಿಕ್ಷಣ ಹಕ್ಕನ್ನು ಪಡೆಯುವಂತಾಗಬೇಕು ಎಂದರು.

ಗ್ರಾಹಕರ ಪರಿಹಾರ ವೇದಿಕೆಯು ಗ್ರಾಹಕರ ಹಿತರಕ್ಷಣೆ ಮಾಡುತ್ತದೆ. ಕಡಿಮೆ ಖರ್ಚಿನಲ್ಲಿ ಪರಿಹಾರ ಪಡೆಯಬಹುದಾಗಿದೆ. ಗ್ರಾಹಕರು, ಮೋಸ ವಂಚನೆಗೆ ಒಳಗಾದಾಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ನೀಡಿದರೆ ಮೂರು ತಿಂಗಳೊಳಗೆ ತೀರ್ಪು ನೀಡಿ ಅತಿ ಕಡಿಮೆ ಖರ್ಚಿನಲ್ಲಿ ಪರಿಹಾರ ಪಡೆಯಬಹುದಾಗಿದೆ ಎಂದು ತಿಳಿಸಿದರು.

ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಕೆ.ಡಿ.ಪಾರ್ವತಿ ಮಾತನಾಡಿ ಗ್ರಾಹಕರು ತಾವು ಕೊಂಡುಕೊಳ್ಳುವ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಬೇಕು. ಹೆಚ್ಚು ಪದಾರ್ಥ ದೊರೆಯುತ್ತದೆ ಎಂದು ಮೋಸ ಹೋಗುವದು ಬೇಡ. ಕಲಬೆರಕೆ ಪದಾರ್ಥಗಳನ್ನು ತಡೆಯಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಹಣ ಕಳೆದುಕೊಳ್ಳುವದರ ಜತೆಗೆ ಪೌಷ್ಟಿಕಾಂಶದ ಕೊರತೆ ಎದುರಿಸಬೇಕಾಗುತ್ತದೆ. ಪ್ರತೀ ದಿನ ಗ್ರಾಹಕರು ಜಾಗೃತರಾಗಿರಬೇಕು. ಗ್ರಾಹಕರು ಪದಾರ್ಥಗಳನ್ನು ಕೊಳ್ಳುವಾಗ ರಶೀತಿಯನ್ನು ಕಡ್ಡಾಯವಾಗಿ ಪಡೆಯಬೇಕು ಎಂದರು.

ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯೆ ಎಂ.ಎಸ್. ಲತಾ ಮಾತನಾಡಿ ಗ್ರಾಹಕರು ಮೋಸಕ್ಕೆ ತುತ್ತಾದಾಗ ಗ್ರಾಹಕರ ವೇದಿಕೆಗೆ ಅರ್ಜಿ ಸಲ್ಲಿಸಿ ಪರಿಹಾರವನ್ನು ಕಂಡುಕೊಳ್ಳಲು ಮುಂದಾಗಬೇಕು. ಈ ಸಂದರ್ಭದಲ್ಲಿ ತಾಳ್ಮೆ, ಸಂಯಮ ಮುಖ್ಯ. ಆ ನಿಟ್ಟಿನಲ್ಲಿ ಗ್ರಾಹಕರು ತಮ್ಮ ಹಕ್ಕುಗಳನ್ನು ಚಲಾಯಿಸಬೇಕು ಎಂದು ನುಡಿದರು.

ಕುಶಾಲನಗರದ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಅಧ್ಯಕ್ಷ ಎ.ಎ. ಚಂಗಪ್ಪ ಮತ್ತಿತರರು ಇದ್ದರು. ಶಾಲಾ ಗ್ರಾಹಕ ಕ್ಲಬ್‍ಗಳಿಗೆ ಇದೇ ಸಂದರ್ಭದಲ್ಲಿ ಚೆಕ್ ವಿತರಿಸಲಾಯಿತು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ ಅವರು ಸ್ವಾಗತಿಸಿ, ದೀಪಿಕಾ ಪ್ರಾರ್ಥಿಸಿದರು, ಸಾರ್ವಜನಿಕ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣಾಧಿಕಾರಿ ರಮೇಶ್ ನಿರೂಪಿಸಿದರು, ವಂದಿಸಿದರು.