ಸೋಮವಾರಪೇಟೆ, ಮಾ. 24: ದಕ್ಷಿಣ ಕನ್ನಡ ಜಿಲ್ಲೆಯ ಮೂಲದವರಾದ ಆದಿದ್ರಾವಿಡ ಜನಾಂಗದವರಿಗೆ ಕೊಡಗಿನಲ್ಲಿ ಪಾಲೆ, ಹರಿಜನ, ಎಡಗೈ, ಆದಿಕರ್ನಾಟಕ ಎಂಬಿತ್ಯಾದಿ ಜಾತಿ ಪ್ರಮಾಣ ಪತ್ರ ನೀಡುತ್ತಿದ್ದು, ಇವುಗಳನ್ನು ಬದಲಿಸಿ ಆದಿದ್ರಾವಿಡ ಹೆಸರಿನಲ್ಲಿಯೇ ಪ್ರಮಾಣ ಪತ್ರ ನೀಡಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘ ಆಗ್ರಹಿಸಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಹೆಚ್.ಎಂ. ಸೋಮಪ್ಪ, ಜಿಲ್ಲೆಯಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಆದಿದ್ರಾವಿಡ ಜನಾಂಗದವರಿದ್ದು, ಇವರುಗಳಿಗೆ ಬೇರೆ ಬೇರೆ ಜಾತಿ ಪ್ರಮಾಣ ಪತ್ರ ನೀಡುತ್ತಿರುವದರಿಂದ ಸಮಸ್ಯೆಯುಂಟಾಗಿದೆ ಎಂದು ಆರೋಪಿಸಿದರು.
ಮಂಗಳೂರು ಮೂಲದವರಾದ ಆದಿದ್ರಾವಿಡ ಜನಾಂಗಕ್ಕೆ ಸೇರಿದ್ದು, ದಕ್ಷಿಣ ಕನ್ನಡದಲ್ಲಿ ಆದಿದ್ರಾವಿಡ ಹೆಸರಿನಲ್ಲಿಯೇ ಜಾತಿ ಪ್ರಮಾಣ ಪತ್ರ ಲಭಿಸುತ್ತಿದೆ. ಆದರೆ ಕೊಡಗಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಗುರುತಿಸಲಾಗುತ್ತಿದೆ. ಈ ಹಿನ್ನೆಲೆ ಪರಿಶಿಷ್ಟ ಜಾತಿ ಅಡಿಯಲ್ಲಿ ಆದಿದ್ರಾವಿಡ ಜಾತಿ ನಮೂದಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೋಮಪ್ಪ ಒತ್ತಾಯಿಸಿದರು.
ಈ ಬಗ್ಗೆ ಜಿಲ್ಲೆಯಾದ್ಯಂತ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಘಟನೆ ಮಾಡಲಿದೆ. ಜನಾಂಗದ ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳಬೇಕಿದೆ. ಮುಂದಿನ ಜನಗಣತಿ ಸಂದರ್ಭ ಆದಿದ್ರಾವಿಡ ಎಂದೇ ನಮೂದಿಸಲು ಜಿಲ್ಲಾಧಿಕಾರಿಗಳು ಸೂಚಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ಏ.29ರಂದು ಮಂಗಳೂರಿನಲ್ಲಿ ಜರುಗುವ ಆದಿದ್ರಾವಿಡ ಸಮಾವೇಶಕ್ಕೆ ಜಿಲ್ಲೆಯಿಂದ ಸಾವಿರಕ್ಕೂ ಅಧಿಕ ಮಂದಿ ತೆರಳುತ್ತಿದ್ದು, ಸಮಾಜದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವದು. ಸಮಾಜ ಬಾಂಧವರು ಅಧಿಕವಾಗಿ ಕೂಲಿಕಾರ್ಮಿಕರಿದ್ದು, ತೋಟಗಳಲ್ಲೇ ವಾಸವಿದ್ದಾರೆ. ಇವರಲ್ಲಿ ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಯತ್ನ ಮಾಡಲಾಗುವದು ಎಂದರು.
ಗೋಷ್ಠಿಯಲ್ಲಿ ಸಮಾಜದ ಗೌರವಾಧ್ಯಕ್ಷ ಪಿ.ಬಿ. ಬಾಬು, ಉಪಾಧ್ಯಕ್ಷ ಪಿ.ಎಲ್. ಸುರೇಶ್, ಪ್ರಧಾನ ಕಾರ್ಯದರ್ಶಿ ಉಮೇಶ್, ಸಂಘಟನಾ ಕಾರ್ಯದರ್ಶಿ ತನಿಯಪ್ಪ, ಕಾರ್ಯಕಾರಿ ಸಮಿತಿಯ ಪೂವಪಪ್ಪ, ಮಧು ಅವರುಗಳು ಉಪಸ್ಥಿತರಿದ್ದರು.