ಮಡಿಕೇರಿ, ಮಾ. 24: ಇಲ್ಲಿಗೆ ಸಮೀಪದ ಮುತ್ತಾರುಮುಡಿ ಗ್ರಾಮದ ಬೆಳೆಗಾರರೊಬ್ಬರ ಮನೆಯಂಗಳಕ್ಕೆ ಹಠಾತ್ ಆಗಮಿಸಿರುವ ಅಪರಿಚಿತ ಗುಂಪೊಂದು; ಮಾಲೀಕರೊಂದಿಗೆ ದುರಹಂಕಾರದಿಂದ ಅಪಾಯಕರ ರೀತಿ ವರ್ತಿಸಿರುವ ಪ್ರಸಂಗ ತಾ. 22 ರಂದು ನಡೆದಿದೆ.

ಮುತ್ತಾರ್ಮುಡಿ ಗ್ರಾಮದ ನಿವಾಸಿ, ಕೆ.ಎಂ. ಮಂದಣ್ಣ ಅವರ ಮನೆಯ ಬಳಿ ಮೊನ್ನೆ ಸಂಜೆ 4.30ರ ಸುಮಾರಿಗೆ 18ರಿಂದ 20 ಮಂದಿಯ ಅಪರಿಚಿತ ಗುಂಪು ಕಾಣಿಸಿಕೊಂಡಿದೆ. ಮನೆಯ ಬಳಿ ಸುಳಿದಾಡುತ್ತಿದ್ದ ಈ ಮಂದಿಯನ್ನು ಅವರು ಯಾಕೆ ಇಲ್ಲಿ ಬಂದಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.

ಮಂದಣ್ಣ ಅವರ ಮಾತು ಕೇಳಿಯೂ ಕೇಳಿಸದಂತೆ ವರ್ತಿಸಿರುವ ಕೆಲವರು; ಅವರ ಮನೆ, ಗೋದಾಮು, ತೋಟದ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ಮಂದಿಯ ಚಲನವಲನದಿಂದ ಆತಂಕಗೊಂಡ ಮಂದಣ್ಣ ಅವರು; ತಮ್ಮ ಪತ್ನಿ ಹಾಗೂ ಮಗುವನ್ನು ಮನೆಯೊಳಗೆ ಇರಿಸಿಕೊಂಡು ತಮ್ಮ ಜಾಗ ಖಾಲಿ ಮಾಡುವಂತೆ ಕೇಳಿಕೊಂಡಿದ್ದಾರೆ.

ಈ ವೇಳೆ ಮಲೆಯಾಳಂ ಮಿಶ್ರಿತ ಕನ್ನಡ ಹಾಗೂ ಇಂಗ್ಲೀಷ್‍ನಲ್ಲಿ ದರ್ಪದ ಮಾತನಾಡಿರುವ ಅಪರಿಚಿತರು; 700 ವರ್ಷಗಳ ಹಿಂದೆ ಮುತ್ತಾರ್ಮುಡಿ ಗ್ರಾಮ ಸಹಿತ ಕೊಡಗಿನ ಬಹುಭಾಗ ತಮ್ಮ ಪೂರ್ವಜರದ್ದಾಗಿತ್ತು ಎಂದು ಹುಂಬತನ ಪ್ರದರ್ಶಿಸಿದ್ದಾರೆ.

ಗ್ರಾಮದ ಮುಖ್ಯರಸ್ತೆಯಿಂದ ತಮ್ಮ ಮನೆಗೆ; ಸುಮಾರು 1.71 ಕಿ.ಮೀ. ದೂರವಿರುವ ಮಣ್ಣು ರಸ್ತೆಯಲ್ಲಿ ಈ ಅಪರಿಚಿತರು ಯಾವ ಉದ್ದೇಶದಿಂದ ಬಂದಿದ್ದರು; ಅಥವಾ ತಮ್ಮ ಮನೆಯ ಸ್ಥಳವನ್ನು ಹೇಗೆ ಕಂಡುಕೊಂಡರು ಎನ್ನುವ ಪ್ರಶ್ನೆ ಮಂದಣ್ಣ ಅವರನ್ನು ಕಾಡುತ್ತಿದೆ.

ಹೀಗಾಗಿ; ಅವರು ಆತ್ಮಸ್ಥೈರ್ಯ ಕಳೆದುಕೊಳ್ಳದೆ; ಈ ಅಪರಿಚಿತರನ್ನು ಒತ್ತಾಯ ಪೂರ್ವಕ ತಮ್ಮ ಜಾಗದಿಂದ ಸುಮಾರು 15 ನಿಮಿಷಗಳ ಕಸರತ್ತು ನಡೆಸಿ ಹೊರ ಕಳುಹಿಸಿದ್ದಾರೆ. ಮನೆ ಆವರಣದಿಂದ ದಬ್ಬಲ್ಪಟ್ಟ ಈ ಅಪರಿಚಿತರು ಮುತ್ತಾರ್ಮುಡಿ ಮುಖ್ಯರಸ್ತೆಯೆಡೆಗೆ ತೆರಳಿದ್ದು; ಅಲ್ಲಿ ನಿಲ್ಲಿಸಿದ್ದ ಕೇರಳ ನೋಂದಣಿ ಸಂಖ್ಯೆಯ (ಕೆ.ಎಲ್. 13. ವೈ 9752) ವಾಹನವೇರಿ ಜಾಗ ಖಾಲಿ ಮಾಡಿದ್ದಾರೆ.

ಒಟ್ಟಿನಲ್ಲಿ ಈ ಅಪರಿಚಿತ ಮಂದಿಯ ಆಗಮನದಿಂದ ಮಂದಣ್ಣ ಕುಟುಂಬ ಆತಂಕಗೊಂಡು; ಪೊಲೀಸ್ ಪುಕಾರು ಸಲ್ಲಿಸಿ ಕಾನೂನು ಕ್ರಮಕ್ಕೆ ಕೋರಿರುವ ಮೇರೆಗೆ; ಮಡಿಕೇರಿ ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡಿದ್ದಾರೆ.