ಮಡಿಕೇರಿ, ಮಾ. 23: ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಯ ಪಾರಾಣೆ ಕೊಣಂಜಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರುಂದಾಡು ಗ್ರಾಮದ ಶ್ರೀಭಗವತಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ತಾ. 28 ರಿಂದ ಏ. 2 ರವರೆಗೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಕುಮ್ಮಂಡ ಪೆಮ್ಮಯ್ಯ, ರೂ. 1 ಕೋಟಿ ವೆಚ್ಚದಲ್ಲಿ ಶ್ರೀ ಭಗವತಿ ಅನ್ನಪೂರ್ಣೇಶ್ವರಿ ದೇಗುಲದ ಜೀರ್ಣೊದ್ಧಾರ ಕಾರ್ಯ ನೆರವೇರಿದೆ ಎಂದರು. ದೇಗುಲದ ಅನ್ನಪೂರ್ಣೇಶ್ವರಿ, ಗಣಪತಿ ಮತ್ತು ಅಯ್ಯಪ್ಪ ದೇವರುಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಮಂಗಳೂರಿನ ಮರಕಡದ ಶ್ರೀ ಗುರು ಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ವೇದಮೂರ್ತಿ ನೀಲೆÉೀಶ್ವರ ದಾಮೋದರ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಏ. 2 ರಂದು ಸಂಜೆ 4 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಮಂಗಳೂರಿನ ಮರಕಡ ಶ್ರೀ ಗುರುಪರಾಶಕ್ತಿ ಮಠದ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ. ಈ ಸಂದರ್ಭ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ, ಶಾಸಕ ಕೆ.ಜಿ. ಬೋಪಯ್ಯ, ಮುಳಿಯ ಸಂಸ್ಥೆಯ ಮುಳಿಯ ಕೇಶವ ಪ್ರಸಾದ್, ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು. ದೇವಸ್ಥಾನ ಸಮಿತಿ ಸದಸ್ಯರಾದ ಬಾದುಮಂಡ ಮುತ್ತಪ್ಪ ಮಾತನಾಡಿ, ಶ್ರೀ ಭಗವತಿ ಅನ್ನಪೂರ್ಣೇಶ್ವರಿ ದೇಗುಲವನ್ನು ಪೂರ್ಣವಾಗಿ ಶಿಲೆಯಿಂದ ನಿರ್ಮಿಸಲಾಗಿದ್ದು, ಶಿಲ್ಪಿಗಳಾದ ಉಪ್ಪಿನಂಗಡಿಯ ರಾಜೇಂದ್ರ ಅವರು ಕೆತ್ತನೆ ಕೆಲಸಗಳನ್ನು ನಿರ್ವಹಿಸಿದ್ದಾರೆಂದು ತಿಳಿಸಿದರು. ಮತ್ತೋರ್ವ ಸದಸ್ಯರಾದ ಪಳಂಗಂಡ ಎ. ಸುಬ್ಬಯ್ಯ ಮಾತನಾಡಿ, ದೇವಸ್ಥಾನ ನಿರ್ಮಾಣ ಕಾರ್ಯದ ಸಂದರ್ಭ ಗ್ರಾಮಸ್ಥರು ಸೇರಿದಂತೆ ಭಕ್ತಾದಿಗಳ ಶ್ರಮದಾನವನ್ನು ಸ್ಮರಿಸಿಕೊಂಡರು.
ಗೋಷ್ಠಿಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಚೆರುಮಂದಂಡ ಸುರೇಶ್, ಸದಸ್ಯ ಬಾದುಮಂಡ ಗಣಪತಿ ಉಪಸ್ಥಿತರಿದ್ದರು.