ಸೋಮವಾರಪೇಟೆ, ಮಾ. 22: ತಾಲೂಕಿನ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ ಗ್ರಾಮದ ಬಳಿ ಮೋರಿಯೊಂದು ಸಂಪೂರ್ಣ ಹಾಳಾಗಿದ್ದು ತಕ್ಷಣವೇ ದುರಸ್ತಿಪಡಿಸದಿದ್ದಲ್ಲಿ ಸಂಬಂಧಪಟ್ಟ ಇಲಾಖೆಯ ಎದುರು ಪ್ರತಿಭಟನೆ ನಡೆಸಲಾಗುವದೆಂದು ಪುಷ್ಪಗಿರಿ ಮೂಲನಿವಾಸಿಗಳ ಸಂಘ ಎಚ್ಚರಿಕೆ ನೀಡಿದೆ.
ಈ ಕುರಿತು ಸಂಘದ ಅಧ್ಯಕ್ಷ ಎಂ.ಎಸ್. ಚಂದ್ರಶೇಖರ್ ಮತ್ತು ಕಾರ್ಯದರ್ಶಿ ಎಂ.ಟಿ. ದಿನೇಶ್ ಜಂಟಿ ಪತ್ರಿಕಾ ಹೇಳಿಕೆ ನೀಡಿ, ಕುಮಾರಳ್ಳಿ ಬಾಚಳ್ಳಿ ಸೇತುವೆ ಮೂಲಕ ಹೆಗ್ಗಡಮನೆ ಗ್ರಾಮಕ್ಕೆ ತೆರಳುವ ರಸ್ತೆ ಮತ್ತು ಹಂಚಿನಳ್ಳಿ ಹತ್ತಿರ ಕೊಲ್ಲಿಗೆ ಅಡ್ಡಲಾಗಿರುವ ಮೋರಿ ಕುಸಿದಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಪ್ರದೇಶದಲ್ಲಿ ಅತ್ಯಧಿಕ ಮಳೆಯಾಗುವ ಹಿನ್ನೆಲೆ ಮಳೆಗಾಲ ಪ್ರಾರಂಭವಾಗುವದಕ್ಕೆ ಮೊದಲು ರಸ್ತೆ ಮತ್ತು ಮೋರಿಗಳನ್ನು ದುರಸ್ತಿ ಪಡಿಸಬೇಕೆಂದು ಆಗ್ರಹಿಸಿದ್ದಾರೆ.