ಮಡಿಕೇರಿ, ಮಾ. 22: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯ ಬೀದಿ ಬದಿಗಳಲ್ಲಿ ಮೀನು ಹಾಗೂ ಮಾಂಸ ಮಾರಾಟ ಮಿತಿಮೀರಿ ನಡೆಯುತ್ತಿದ್ದು, ಇದರಿಂದಾಗಿ ಅಶುಚಿತ್ವದ ವಾತಾವರಣ ಮನೆ ಮಾಡಿದೆ ಎಂದು ಆರೋಪಿಸಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸಿದ್ದಾಪುರ “ಎ” ಒಕ್ಕೂಟ ಮತ್ತು ವಾಹನ ಚಾಲಕರ ಮಜ್ದೂರ್ ಸಂಘ ಪ್ರತಿಭಟನೆಯ ಎಚ್ಚರಿಕೆ ನೀಡಿವೆ.
ಜಂಟಿಯಾಗಿ ಪತ್ರಿಕಾ ಹೇಳಿಕೆ ನೀಡಿರುವ ಮಹಿಳಾ ಸಂಘಟನೆಯ ಅಧ್ಯಕ್ಷರಾದ ಪುಷ್ಪ ಹಾಗೂ ಚಾಲಕರ ಸಂಘದ ಅಧ್ಯಕ್ಷ ಕೆ.ಎಂ.ಅನೀಶ್ ರಸ್ತೆ ಬದಿಯ ಮಾಂಸ ಮತ್ತು ಮೀನು ವ್ಯಾಪಾರಿಗಳನ್ನು ತಕ್ಷಣ ತೆರವುಗೊಳಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದೀಗ ಹೊಸದಾಗಿ ರಚನೆಯಾಗಿರುವ ಆಡಳಿತ ಮಂಡಳಿ ಸಂತೆ ಮಾಳದಲ್ಲಿಯೇ ಮೀನು ಮತ್ತು ಮಾಂಸ ವ್ಯಾಪಾರಕ್ಕಾಗಿ ರೂ. 15 ಲಕ್ಷ ವೆಚ್ಚದಲ್ಲಿ ಮಳಿಗೆಗಳನ್ನು ನಿರ್ಮಿಸಿ ಕೊಟ್ಟಿದೆ. ಆದರೆ ಇದನ್ನು ಬಳಸಿಕೊಳ್ಳದ ಕೆಲವು ವ್ಯಾಪಾರಿಗಳು ರಾಜಕೀಯ ಪ್ರಭಾವ ಬಳಸಿ ರಸ್ತೆ ಬದಿ ವ್ಯಾಪಾರದಲ್ಲಿ ತೊಡಗಿದ್ದಾರೆ. ಮಾಂಸ ಮತ್ತು ಮೀನಿನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುತ್ತಿರುವದರಿಂದ ಗ್ರಾಮದಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ತಕ್ಷಣ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಲಾಗಿದ್ದು, ಸೂಕ್ತ ಸ್ಪಂದನ ದೊರೆಯದಿದ್ದಲ್ಲಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.