ಮಡಿಕೇರಿ, ಮಾ. 22: ಕೊಡಗು ಜಿಲ್ಲೆಯಲ್ಲಿ ಒಟ್ಟು 68881 ಮಂದಿ ಸಣ್ಣ, ಅತೀ ಸಣ್ಣ ಹಾಗೂ ದೊಡ್ಡ ರೈತರು ಇದ್ದಾರೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಇರುವ ರೈತರ ಸಂಖ್ಯೆ ಎಷ್ಟು, ಅವರಲ್ಲಿ ಬೆಳೆ ವಿಮೆ ಮಾಡಿಸಿದ ರೈತರೆಷ್ಟು ಮತ್ತು ಬೆಳೆವಿಮೆ ಸೌಲಭ್ಯದಿಂದ ರೈತರು ಪಡೆದ ಮೊತ್ತವೆಷ್ಟು ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಕೇಳಿದ ಪ್ರಶ್ನೆಗೆ ಕೃಷಿ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ, ಫಸಲ್ ಭೀಮಾ ಯೋಜನೆ ಹಾಗೂ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ 2016ರ ಮುಂಗಾರು ಹಂಗಾಮಿನಲ್ಲಿ ಇದುವರೆಗೆ 7823 ರೈತರು ನೋಂದಾಯಿಸಿರುತ್ತಾರೆ.

ಮಡಿಕೇರಿ ತಾಲೂಕಿನಲ್ಲಿ 2098, ಸೋಮವಾರಪೇಟೆಯಲ್ಲಿ 3849, ವೀರಾಜಪೇಟೆಯಲ್ಲಿ 1876 ರೈತರು ಸೇರಿದಂತೆ ಒಟ್ಟು 7823 ಮಂದಿ ರೈತರು ನೋಂದಾಯಿಸಿದ್ದಾರೆ.

ರಾಜ್ಯದ ರೈತರು ಬೆಳೆ ವಿಮೆ ವ್ಯಾಪ್ತಿಗೆ ಒಳಪಡಲು ಅನುಕೂಲವಾಗುವಂತೆ ಪ್ರತಿ ವರ್ಷ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿದಂತೆ ಸರಕಾರಿ ಆದೇಶ ಹೊರಡಿಸಿದ ನಂತರ ಕೃಷಿ ಇಲಾಖಾ ವತಿಯಿಂದ ಪ್ರಮುಖ ದಿನ ಪತ್ರಿಕೆಗಳಲ್ಲಿ, ಆಕಾಶವಾಣಿ, ದೂರದರ್ಶನದಲ್ಲಿ ರಾಜ್ಯಾದ್ಯಂತ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿ ಕೃಷಿ ಇಲಾಖೆ ವತಿಯಿಂದ ಗ್ರಾಮ ಮಟ್ಟದಲ್ಲಿ ಕೃಷಿ ತರಬೇತಿ ಕೇಂದ್ರಗಳಲ್ಲಿ ರೈತರಿಗೆ ತರಬೇತಿ ಏರ್ಪಡಿಸುವ ಸಂದರ್ಭದಲ್ಲಿ ಬೆಳೆ ವಿಮೆ ಬಗ್ಗೆ ತಿಳಿಸಲಾಗಿದೆ. ಆಕಾಶವಾಣಿ ಮುಖಾಂತರ, ಗ್ರಾಮ ಸಭೆ ನಡೆಯುವ ಸಂದರ್ಭಗಳಲ್ಲಿ, ಕೃಷಿ ವಸ್ತು ಪ್ರದರ್ಶನ ಏರ್ಪಡಿಸಿ ಇಲಾಖಾ ಕಾರ್ಯಕ್ರಮ, ರೈತರಿಗೆ ದೊರೆಯುವ ಸೌಲಭ್ಯಗಳು ಹಾಗೂ ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಲಾಗಿದೆ.

ಕೃಷಿ ಮೇಳ ನಡೆಯುವ ಸಂದರ್ಭಗಳಲ್ಲಿ ಹೋಬಳಿ ಮಟ್ಟದ ಕೃಷಿ ಅಭಿಯಾನ ಕಾರ್ಯಕ್ರಮ ಸಂದರ್ಭ, ಜಿಲ್ಲಾ ಕೇಂದ್ರೀಯ ಸಹಕಾರ ಬ್ಯಾಂಕ್ (ಡಿಸಿಸಿ)ನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆ ಏರ್ಪಡಿಸಿದ್ದ ಸಂದರ್ಭದಲ್ಲಿ ಬೆಳೆ ವಿಮೆ ಮಾಹಿತಿ ನೀಡಲಾಗಿದೆ.

ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಸಂರಕ್ಷಣೆ ಪೋರ್ಟಲ್ ಮೂಲಕ ಬೆಳೆ ವಿಮಾ ನಷ್ಟ ಪರಿಹಾರವನ್ನು ಬೆಳೆ ಸಾಲ ಪಡೆದ ರೈತರ ಉಳಿತಾಯ ಖಾತೆಗೆ ಜಮೆ ಮಾಡಲು ಹಾಗೂ ಬೆಳೆ ಸಾಲ ಪಡೆಯದ ರೈತ ಫಲಾನುಭವಿಗಳ ಬೆಳೆ ವಿಮಾ ನಷ್ಟ ಪರಿಹಾರವನ್ನು ಅವರ ಆಧಾರ್ ಜೋಡಣೆಯ ಬ್ಯಾಂಕ್ ಖಾತೆಗೆ ಜಮೆ ಮಾಡಲು ಕ್ರಮಕೈಗೊಳ್ಳಲಾಗಿದೆ.

ಬೆಳೆ ಸಾಲ ಪಡೆದ ರೈತರ ಉಳಿತಾಯ ಖಾತೆ ಸರಿಯಿರುವ ಕುರಿತು ಪರಿಶೀಲನೆ ಹಾಗೂ ಬೆಳೆ ಸಾಲ ಪಡೆಯದ ರೈತರ ಖಾತೆಗೆ ಆಧಾರ್ ಜೋಡಣೆ ಸಹ ಪ್ರಗತಿಯಲ್ಲಿದೆ.

ಬೆಳೆ ನಷ್ಟ ಪರಿಹಾರವನ್ನು ಸಂರಕ್ಷಣೆ ಪೋರ್ಟಲ್‍ನಲ್ಲಿಯೇ ಲೆಕ್ಕ ಹಾಕಲಾಗುತ್ತಿದ್ದು, ಬೆಳೆ ವಿಮಾ ನಷ್ಟ ಪರಿಹಾರವನ್ನು ಶೀಘ್ರದಲ್ಲಿಯೇ ಇತ್ಯರ್ಥಪಡಿಸಲಾಗುವದು ಎಂದು ಉತ್ತರಿಸಿದ್ದಾರೆ.