ಕುಶಾಲನಗರ, ಮಾ. 22: ಯಾವದೇ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದೆ ಹೊರತು ಧರ್ಮದ ಲೇಪನಗೊಳಿಸಬಾರದು ಎಂದು ಸೋಮವಾರಪೇಟೆಯ ಉದ್ಯಮಿ ಹಾಗೂ ಕಲಾವಿದ ಎಸ್.ಎ. ಮುರಳೀಧರ್ ಹೇಳಿದರು.
ಕುಶಾಲನಗರದ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿ.ವಿ. ಪಾರ್ವತಿ ಅವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗಿದ್ದ ಅಂತರ್ ಪಾಲಿಟೆಕ್ನಿಕ್ ಭಾವಗೀತೆ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆ ಎಂಬದು ದೈವದತ್ತ ಕೊಡುಗೆ ಯಾಗಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಳೆಸುವದು ಪ್ರತಿಯೊಬ್ಬರ ಕರ್ತವ್ಯವಾಗಬೇಕಿದೆ ಎಂದರು.
ಕಾಲೇಜು ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿ ಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಬೇಕಿದೆ ಎಂದರು.
ಮಹಿಳಾ ಪಾಲಿಟೆಕ್ನಿಕ್, ಕೆ.ಆರ್.ಪೇಟೆ, ಕುಶಾಲನಗರ ಪಾಲಿಟೆಕ್ನಿಕ್ ಕಾಲೇಜುಗಳ 8 ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.
ಕುಶಾಲನಗರದ ಲಾವಣ್ಯ, ಪತ್ತರ್ ಹಾಗೂ ಮುರಳೀಧರ್ ತೀರ್ಪುಗಾರ ರಾಗಿ ಕಾರ್ಯ ನಿರ್ವಹಿಸಿದರು. ಈ ಸಂದರ್ಭ ಮೈಸೂರು ಜೆಎಸ್‍ಎಸ್ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರಾದ ಮಹೇಶ್, ಕಾವೇರಿ ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಎನ್. ಎಸ್. ಲೋಕೇಶ್, ಕಾಲೇಜು ಉಪನ್ಯಾಸಕ ರಾದ ಯೋಗಾನಂದ, ಉಮಾಪತಿ ಇದ್ದರು. ಉಪನ್ಯಾಸಕಿ ಸುನೀತಾ ಸ್ವಾಗತಿಸಿದರು, ಸ್ಮಿತಾ ನಿರೂಪಿಸಿದರು, ಜಡೆಸ್ವಾಮಿ ವಂದಿಸಿದರು.