ಚೆಟ್ಟಳ್ಳಿ, ಮಾ. 22: 2016-17ನೇ ಸಾಲಿನ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಕಾಯಕಲ್ಪ ಪ್ರಶಸ್ತಿಯನ್ನು ಪಡೆದಿರುವ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾದ ಡಾ. ಗಿರೀಶ್ ಅವರಿಗೆ ತಾಲೂಕು ಪಂಚಾಯಿತಿ ಸದಸ್ಯ ಮತ್ತು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರು ಶಾಲು ಹೊದಿಸಿ ಹಣ್ಣು-ಹಂಪಲು ನೀಡಿ ಸನ್ಮಾನಿಸಿದರು. ಕಾರ್ಯಕ್ರಮ ದಲ್ಲಿ ಬಟ್ಟೀರ ಕೆ ಅಪ್ಪಣ್ಣ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಭಾಗವಹಿಸಿದ್ದರು.

ಬಲ್ಲಾರಂಡ ಮಣಿ ಉತ್ತಪ್ಪ ಅವರು ಮಾತನಾಡಿ, ವೈದ್ಯಾಧಿಕಾರಿಯಾಗಿ ಚೆಟ್ಟಳ್ಳಿಯಲ್ಲಿ ಡಾ. ಗಿರೀಶ್ ಅವರು ಸುಮಾರು 10-12 ವರ್ಷಗಳಿಂದ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು, ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವದು ಅಲ್ಲದೇ, ಪರಿಸರ ಸಂರಕ್ಷಣೆಯತ್ತ ಗಮನಹರಿಸುವದರ ಮೂಲಕ ಪ್ರಶಸ್ತಿ ಲಭಿಸಿರುವದು ಶ್ಲಾಘನೀಯ ಎಂದು ತಿಳಿಸಿದರು.