ಶ್ರೀಮಂಗಲ, ಮಾ. 22: ಕುಟ್ಟ ಪಟ್ಟಣದಲ್ಲಿ ಮಾರುಕಟ್ಟೆ ತ್ಯಾಜ್ಯಗಳನ್ನು ಕಾಂಪೋಸ್ಟ್ ಗೊಬ್ಬರವಾಗಿ ಪರಿವರ್ತಿಸಿ ತ್ಯಾಜ್ಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನೂತನವಾಗಿ ಕಾಂಪೋಸ್ಟ್ ಘಟಕವನ್ನು ಸ್ಥಾಪಿಸಲಾಗಿದ್ದು, ಘಟಕವನ್ನು ಗ್ರಾ.ಪಂ. ಅಧ್ಯಕ್ಷೆ ವಿ.ಪಿ. ಲೀಲಾವತಿ ಉದ್ಘಾಟಿಸಿದರು.

14ನೇ ಹಣಕಾಸು ಯೋಜನೆಯಲ್ಲಿ ರೂ. 2 ಲಕ್ಷ ಹಾಗೂ ಗ್ರಾ.ಪಂ.ನಿಂದ ರೂ. 60 ಸಾವಿರ ಸೇರಿ ಒಟ್ಟು ರೂ. 2.60 ಲಕ್ಷದಲ್ಲಿ ಕಾಂಪೋಸ್ಟ್ ಘಟಕವನ್ನು ಸ್ಥಾಪಿಸಲಾಗಿದೆ ಎಂದು ಲೀಲಾವತಿ ತಿಳಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಜಿ.ಪಂ. ಸದಸ್ಯ ಶಿವು ಮಾದಪ್ಪ ಅವರು, ತ್ಯಾಜ್ಯಗಳಾದ ತರಕಾರಿ ಇತ್ಯಾದಿಗಳನ್ನು ಈ ಘಟಕದಲ್ಲಿ ಸುರಿದು ಕೊಳೆಯುವ ಬ್ಯಾಕ್ಟೀರಿಯಾಗಳನ್ನು ಹಾಕಿ ಕಾಂಪೋಸ್ಟ್ ಮಾಡಲು ಈ ಘಟಕ ಸ್ಥಾಪಿಸಲಾಗಿದೆ. ಕೊಳೆಯುವಂತಹ ಪದಾರ್ಥಗಳನ್ನು ಪಟ್ಟಣದ ಪ್ರತಿಯೊಬ್ಬರು ರಸ್ತೆ ಚರಂಡಿ ಇತ್ಯಾದಿಗಳಿಗೆ ಸುರಿಯದೆ ಈ ಘಟಕದಲ್ಲಿ ಸುರಿದು ಇದರ ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಿದರು.

ತಾ.ಪಂ. ಸದಸ್ಯ ಪಲ್ವೀನ್ ಪೂಣಚ್ಚ ಮಾತನಾಡಿದರು. ತಾಲೂಕು ಅಕ್ರಮ-ಸಕ್ರಮ ಸಮಿತಿ ಸದಸ್ಯ ಹೆಚ್.ವೈ. ರಾಮಕೃಷ್ಣ, ಗ್ರಾ.ಪಂ. ಉಪಾಧ್ಯಕ್ಷ ಹೊಟ್ಟೇಂಗಡ ಪ್ರಕಾಶ್ ಉತ್ತಪ್ಪ, ಜಿ.ಪಂ. ನಿರ್ಮಲ ಭಾರತ್ ಅಭಿಯಾನದ ನೋಡೆಲ್ ಅಧಿಕಾರಿ ಅಜ್ಜಿಕುಟ್ಟಿರ ಸೂರಜ್, ಪಿ.ಡಿ.ಓ. ಬಲರಾಮೇಗೌಡ, ಗ್ರಾ.ಪಂ. ಸದಸ್ಯರು ಹಾಜರಿದ್ದರು.