ಮಡಿಕೇರಿ, ಮಾ. 22: ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂದೇಶಗಳನ್ನು ಅರ್ಥೈಸುವ ಉದ್ದೇಶದಿಂದ ದಲಿತ ಸಮುದಾಯದ ಕುಟುಂಬಗಳಿಗೆ ಡಾ. ಬಿ.ಆರ್. ಅಂಬೇಡ್ಕರ್ ಜೀವನ ಮೌಲ್ಯದ ಸುಮಾರು ಐದು ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಹಂಚುವ ಗುರಿಯನ್ನು ಹೊಂದಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ತಿಳಿಸಿದ್ದಾರೆ.
ನೆಲ್ಲಿಹುದಿಕೇರಿಯ ಎಂ.ಜಿ. ಕಾಲೋನಿಯಲ್ಲಿ ಡಾ. ಅಂಬೇಡ್ಕರ್ ಅವರ ಪುಸ್ತಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಡಾ. ಅಂಬೇಡ್ಕರ್ ಅವರ ಆದರ್ಶ ಮತ್ತು ಜೀವನ ಚರಿತ್ರೆಯ ಪುಸ್ತಕಗಳು ಪ್ರತಿಯೊಬ್ಬರು ಮನೆಯಲ್ಲಿರಬೇಕು. ಪ್ರಸ್ತುತ ವರ್ಷ ಏಪ್ರಿಲ್ ತಿಂಗಳೊಳಗೆ ಸುಮಾರು 5 ಸಾವಿರ ಪುಸ್ತಕಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ದಲಿತ ಸಂಘರ್ಷ ಸಮಿತಿಯ ನೆಲ್ಲಿಹುದಿಕೇರಿ ಗ್ರಾಮ ಸಂಚಾಲಕ ರವಿ, ಅರೆಕಾಡು ಗ್ರಾಮ ಸಂಚಾಲಕ ಹೆಚ್.ಟಿ. ವೆಂಕಟೇಶ್, ಪ್ರಮುಖರಾದ ಪಾರ್ವತಿ, ಶೈಲ, ಲಕ್ಷ್ಮಿ, ಮಂಜುಳ ಮತ್ತಿತರರು ಉಪಸ್ಥಿತರಿದ್ದರು. ಎಂ.ಜಿ. ಕಾಲೋನಿಯ ನಿವಾಸಿಗಳಿಗೆ ಅಂಬೇಡ್ಕರ್ ಅವರ ಜೀವನ ಚರಿತ್ರೆಯ ಪುಸ್ತಕಗಳನ್ನು ವಿತರಿಸಲಾಯಿತು.