ಗೋಣಿಕೋಪ್ಪಲು, ಮಾ. 22: ವಿದ್ಯಾರತ್ನ ಎಜುಕೇಶನ್ ಟ್ರಸ್ಟ್ ಮತ್ತು ಭೂಮಿಕ ಸ್ತ್ರೀಶಕ್ತಿ ಗೊಂಚಲು ತಿತಿಮತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳಾ ಕಾನೂನು ಕಾರ್ಯಾಗಾರ ವನ್ನು ತಿತಿಮತಿಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ನ್ಯಾಯಾಧೀಶ ಮೋಹನ್ ಪ್ರಭು, ಮೂಲಭೂತ ಕರ್ತವ್ಯ, ಕಾನೂನುಗಳನ್ನು ಗೌರವಯುತವಾಗಿ ಪಾಲಿಸಿಕೊಂಡು ಜೀವಿಸಬೇಕಾಗಿದೆ. ‘ಎಲ್ಲಿ ನಾರಿಯನ್ನು ಪೂಜಿಸಲಾಗುತ್ತದೋ ಅಲ್ಲಿ ದೇವತೆ ನೆಲೆಸುತ್ತಾಳೆ’. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾಳೆ. ಇನ್ನಷ್ಟು ಪ್ರೋತ್ಸಾಹ, ಸಹಕಾರ ಲಭಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಕೊಡಲಾಗುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆಗೆ, ಅಭಿವೃದ್ಧಿಗೋಸ್ಕರ ಬಹಳ ಕಾನೂನು, ಕಾಯಿದೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕೌಟುಂಬಿಕ ಸಮಸ್ಯೆಗಳಾಗಲೀ ಇನ್ಯಾವದೇ ಸಮಸ್ಯೆಗಳಾಗಲೀ ಪರಿಹಾರವಾಗದ ಸಮಸ್ಯೆಗಳಲ್ಲ. ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಅದು ಸೂಕ್ತ ಕಾನೂನು ಮಾಹಿತಿಗಳ ಮೂಲಕ ಆಗಬೇಕಾಗಿದೆ ಎಂದು ಹಿರಿಯ ವಕೀಲೆ ರೀನಾ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಾಗಾರದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಉಪನ್ಯಾಸಕ ಅಕ್ರಂ, ಸಾಮಾಜಿಕ ಕ್ಷೇತ್ರದಲ್ಲಿನ ಮಾರ್ಪಾಡುಗಳು ಜಗತ್ತನ್ನು ಬೆರಗು ಗೊಳಿಸಿದೆ. ಆದರೆ ಬದಲಾಗದಿರು ವದು ಹೆಣ್ಣಿನ ಶೋಷಣೆ. ಇದು ನಿಲ್ಲಬೇಕಾಗಿದೆ. ನಿರಂತರ ಕಾನೂನು, ಕಾರ್ಯಾಗಾರ, ಮಾರ್ಗದರ್ಶನ ಸಭೆಗಳು ಮತ್ತು ಮಾಹಿತಿಗಳ ಮೂಲಕ ತಡೆಗಟ್ಟಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಳಪಂಡ ಟಿಪ್ಪು ಬಿದ್ದಪ್ಪ, ಮಹಿಳೆಯರಿಗೆ ಬೇಕಾದ ಸೌಲಭ್ಯ, ಸಹಕಾರ ನೀಡುವ ಜವಾಬ್ದಾರಿ ಎಲ್ಲರಿಗಿದೆ. ಆಗ ಮಾತ್ರ ಮಹಿಳಾ ಸಬಲೀಕರಣವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಪಿ.ಆರ್. ಪಂಕಜ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಶಿವಕುಮಾರ್, ಸ್ತ್ರೀ ಶಕ್ತಿ ಸಂಘದ ಜಿಲ್ಲಾ ಖಜಾಂಚಿ ಎಂ.ಎಸ್. ರಜನಿ, ವಿದ್ಯಾರತ್ನ ಎಜ್ಯುಕೇಶನ್ ಟ್ರಸ್ಟ್ ಸಾಮಾಜಿಕ ಸೇವಾ ವಿಭಾಗದ ಮಹಿಳಾ ಘಟಕದ ಸಂಚಾಲಕ ಚಕ್ಕೇರ ಸುಮನ್ ಹಾಜರಿದ್ದರು. ಭೂಮಿಕ ಸ್ತ್ರೀಶಕ್ತಿ ಸಂಘದ ಉಪಾಧ್ಯಕ್ಷೆ ಮುತ್ತಮ್ಮ ಸ್ವಾಗತಿಸಿ, ಮಂಜುಳ ವಂದಿಸಿದರು.