ಮಡಿಕೇರಿ, ಮಾ. 22: ಸುಂಟಿಕೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ಕೆಲವರು ಯತ್ನಿಸುತ್ತಿದ್ದು, ಏಕಪಕ್ಷೀಯ ಧೋರಣೆಯ ಮೂಲಕ ಸಮಿತಿ ಯೊಂದನ್ನು ರಚಿಸಿಕೊಂಡಿದ್ದಾರೆ ಎಂದು ಸ್ಥಳೀಯ ಅಂಬೇಡ್ಕರ್ ಸಂಘ ಆರೋಪಿಸಿದೆ.

ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ಎಂ.ಎಸ್. ರವಿ, ಉಪಾಧ್ಯಕ್ಷ ರಾಮಚಂದ್ರ ಹಾಗೂ ಕಾರ್ಯದರ್ಶಿ ಎ. ಜಯಣ್ಣ, ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಗೊಳ್ಳಲು ಅಂಬೇಡ್ಕರ್ ಸಂಘದ ಶ್ರಮವೇ ಕಾರಣವೆಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 20 ವರ್ಷಗಳಿಂದ ದಲಿತರು ಹಾಗೂ ದುರ್ಬಲರ ಪರವಾಗಿ ಹೋರಾಟ ನಡೆಸುತ್ತಿರುವ ಅಂಬೇಡ್ಕರ್ ಸಂಘ ಸುಂಟಿಕೊಪ್ಪದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆಂದು ಸಾಕಷ್ಟು ಪ್ರಯತ್ನ ನಡೆಸಿತು. ಇದರ ಪರಿಣಾಮವಾಗಿ ಸ್ಥಳೀಯ ಗ್ರಾ.ಪಂ. ಕೂಡ ಜಾಗವನ್ನು ನೀಡಿ ಸಹಕರಿಸುವದರೊಂದಿಗೆ ಭವನ ನಿರ್ಮಾಣ ಕಾರ್ಯ ಸುಲಭವಾಯಿತು.

ಆದರೆ ಇದೀಗ ಭವನ ನಿರ್ಮಾಣ ಯೋಜನೆ ಸಂಪೂರ್ಣವಾದ ನಂತರ ಸಂಬಂಧ ಪಡದ ವ್ಯಕ್ತಿಗಳು ನಿಯಮ ಬಾಹಿರವಾಗಿ ಅಂಬೇಡ್ಕರ್ ಭವನ ಸಮಿತಿಯನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಯಲ್ಲಿ ನಮ್ಮ ಅನುಮತಿ ಇಲ್ಲದೆ ಕೆಲವರ ಹೆಸರುಗಳನ್ನು ಸೇರ್ಪಡೆಗೊಳಿಸಲಾಗಿದೆ.

ಈ ಸಮಿತಿಯನ್ನು ಅಧಿಕೃತವೆಂದು ಪರಿಗಣಿಸದೆ ಭವನ ನಿರ್ಮಾಣಕ್ಕೆ ಕಾರಣಕರ್ತರಾದ ಅಂಬೇಡ್ಕರ್ ಸಂಘದ ಪದಾಧಿಕಾರಿಗಳನ್ನೊಳಗೊಂಡ ನೂತನ ಸಮಿತಿಯನ್ನು ರಚಿಸಬೇಕು ಮತ್ತು ಸುಂಟಿಕೊಪ್ಪ ಗ್ರಾ.ಪಂ ಭವನವನ್ನು ಅಂಬೇಡ್ಕರ್ ಸಂಘಕ್ಕೆ ಹಸ್ತಾಂತರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ರವಿ ಒತ್ತಾಯಿಸಿದ್ದಾರೆ. ತಪ್ಪಿದಲ್ಲಿ ಪ್ರತಿಭಟನೆ ನಡೆಸುವದಾಗಿ ಎಚ್ಚರಿಕೆ ನೀಡಿದ್ದಾರೆ.