ವಿದ್ಯಾರ್ಥಿಗಳಿಗೆ ರಾಜೇಂದ್ರ ಪ್ರಸಾದ್ ಕರೆ

ಮಡಿಕೇರಿ, ಮಾ. 11: ವಿದ್ಯಾರ್ಥಿ ಜೀವನದಲ್ಲಿ ಸಮಯವನ್ನು ಕೇವಲ ಪಠ್ಯ ಕಲಿಕೆಗೆ ಮಾತ್ರ ಸೀಮಿತಗೊಳಿಸದೆ, ಉಜ್ವಲ ಭವಿಷ್ಯದ ಕಡೆ ಯೋಜನೆ ರೂಪಿಸುವದು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೂ ಗಮನಹರಿಸುವದು ಮುಖ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಜೇಂದ್ರ ಪ್ರಸಾದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಆಡಳಿತದಲ್ಲಿ ಸೇವೆ ಸಲ್ಲಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೆ ಹೆಚ್ಚಿನ ಒಲವು ತೋರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೊಡಗು ಜಿಲ್ಲಾ ರೋಟರಿ ಗವರ್ನರ್ ರೊಟೇರಿಯನ್ ಸುರೇಶ್ ಚಂಗಪ್ಪ, ವಿದ್ಯಾರ್ಥಿಗಳು ನಿರಂತರ ಪ್ರಯತ್ನವನ್ನು ಮುಂದುವರಿಸಿದರೆ ಜೀವನದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಕೆ.ಎಂ. ಲೋಕೇಶ್, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬುದ್ಧಿವಂತಿಕೆಗೆ ಮಾತ್ರ ಪ್ರಾಶಸ್ತ್ಯವಿದ್ದು, ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ಕಲಿಕೆಗೆ ವಿನಿಯೋಗಿಸಿ ಪ್ರತಿಭಾವಂತರಾಗಬೇಕು ಎಂದು ಕರೆ ನೀಡಿದರು.

ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಿದ ಎನ್‍ಸಿಸಿ ಕೆಡೆಟ್‍ಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಸಾಮಥ್ರ್ಯ ಹಾಗೂ ಸಾಧನೆಯ ವರದಿಯನ್ನು ಪ್ರಾಂಶುಪಾಲೆ ಡಾ ಪಾರ್ವತಿ ಅಪ್ಪಯ್ಯ ಅವರು ಮಂಡಿಸಿದರು. ಪ್ರಾಧ್ಯಾಪಕ ಡಾ. ಶ್ರೀಧರ ಹೆಗಡೆ, ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.