ವೀರಾಜಪೇಟೆ, ಮಾ. 11: ಕೊಡಗು ಜಿಲ್ಲೆಯಲ್ಲಿ ಬಹುರಾಷ್ಟ್ರ ಕಂಪೆನಿಗಳಿಂದ ಮತ್ತು ಭೂ ಮಾಲೀಕರಿಂದ ಒತ್ತುವರಿ ಮಾಡಲ್ಪಟ್ಟಿರುವ ಪೈಸಾರಿ ಜಾಗವನ್ನು ತೆರವುಗೊಳಿಸಿ ಜಿಲ್ಲೆಯ ಮೂಲ ನಿವಾಸಿಗಳಾದ ಭೂರಹಿತರಿಗೆ ನೀಡಬೇಕೆಂದು ಮತ್ತು ಕೇಂದ್ರ ಸರಕಾರ ಇತ್ತೀಚೆಗೆ ಅಡುಗೆ ಅನಿಲದ ಮೇಲೆ ವಿಧಿಸಿರುವ ಹೆಚ್ಚುವರಿ ಬೆಲೆಯನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿ.ಪಿ.ಐ) ಮತ್ತು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಸಮಿತಿ ವತಿಯಿಂದ ಜಂಟಿಯಾಗಿ ವೀರಾಜಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಹಶೀಲ್ದಾರ್ ಮಹದೇವಸ್ವಾಮಿ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಸಿ.ಪಿ.ಐ. ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್, ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಭೂಮಿಯನ್ನು ತೆರವುಗೊಳಿಸಿ ಮೂಲ ನಿವಾಸಿಗಳಿಗೆ ನೀಡಿ ಎಲ್ಲಾ ಅರಣ್ಯ ವಾಸಿಗಳಿಗೂ ಹಕ್ಕು ಪತ್ರ ನೀಡಬೇಕು. ವೀರಾಜಪೇಟೆ ತಾಲೂಕು ಕಚೇರಿಯಲ್ಲಿರುವ ಸರ್ವೆ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವÀವಾಡುತ್ತಿದ್ದು, ಭ್ರಷ್ಟ ಅಧಿಕಾರಿಗಳನ್ನು ಜಿಲ್ಲೆಯಿಂದ ವರ್ಗಾವಣೆಗೊಳಿಸಬೇಕು ಮತ್ತು ಮಧ್ಯವರ್ತಿಗಳನ್ನು ತಡೆಗಟ್ಟುವಂತೆ ತಹಶೀಲ್ದಾರರನ್ನು ಒತ್ತಾಯಿಸಿದÀರು. ಸರ್ಕಾರ ನಿಗದಿ ಮಾಡಿರುವ ಕನಿಷ್ಟ ಕೂಲಿಯನ್ನು ಅಸಂಘಟಿತ ಕಾರ್ಮಿಕರಿಗೂ ಜಾರಿಗೊಳಿಸಬೇಕು, ರೈತರ ಸಾಲಮನ್ನಾ ಮಾಡಿ ಬೆಳೆ ನಷ್ಟ ಆಗಿರುವದಕ್ಕೆ ಪರಿಹಾರ ನೀಡಬೇಕು ಎಂದರು.
ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ ಕೊಡಗು ಜಿಲ್ಲಾ ಕಾರ್ಯದರ್ಶಿ ಹಾಗೂ ಆರ್ಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ. ಬಷೀರ್ ಮಾತನಾಡಿ, ಅಡುಗೆ ಅನಿಲವೂ ಸೇರಿದಂತೆ ನಿತ್ಯೋಪಯೋಗ ವಸ್ತುಗಳ ಬೆಲೆ ದಿನೇ ದಿನೇ ಏರುತ್ತಿರುವದರಿಂದ ಜನಸಾಮಾನ್ಯರಿಗೆ ತೀವ್ರ ಹೊರೆಯಾಗುತ್ತಿದ್ದು, ಕೇಂದ್ರ ಸರ್ಕಾರ ಬೆಲೆ ಏರಿಕೆಯನ್ನು ತಡೆಗಟ್ಟಬೇಕು. ನೋಟು ಅಮಾನ್ಯದಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗಿದ್ದು, ಕಪ್ಪು ಹಣದ ಬಗ್ಗೆ ಕೇಂದ್ರ ಸರ್ಕಾರ ಯಾವದೇ ಮಾಹಿತಿಯನ್ನು ನೀಡುತ್ತಿಲ್ಲ ಎಕೆ ಎಂದು ಬಷೀರ್ ಪ್ರಶ್ನಿಸಿದರು.
ಎರಡೂ ಪಕ್ಷಗಳ ಜಿಲ್ಲಾ ಸಮಿತಿಯಿಂದ ಬೇರೆ ಬೇರೆ ಮನವಿಗಳನ್ನು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಇದಕ್ಕೂ ಮೊದಲು ನಗರದ ಗಡಿಯಾರ ಕಂಬದಿಂದ ತಾಲೂಕು ಕಚೇರಿವರೆಗೆ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಕಾರರು ಮೆರವಣಿಗೆ ನಡೆಸಿದರು. ಕಮ್ಯೂನಿಸ್ಟ್ ಪಕ್ಷದ ಜಂಟಿ ಕಾರ್ಯದರ್ಶಿ ಹೆಚ್.ಡಿ. ರಮೇಶ್ ಮಾಯಮುಡಿ, ಆದಿವಾಸಿ ಮಹಾಸಭಾ ತಾಲೂಕು ಅಧ್ಯಕ್ಷ ಸುಬ್ಬ, ಮುತ್ತ ಹಾಗೂ ವೆಲ್‍ಫೇರ್ ಪಾರ್ಟಿಯ ಕೆ.ಕೆ. ಅಶೋಕ್, ಇ.ಎಂ. ಅಬ್ದುಲ್ ಖಾದರ್, ಟಿ.ಎಂ. ಅಶ್ರಫ್, ದಿನೇಶ್ ಪಾಲ್ಗೊಂಡಿದ್ದರು.