ಮಾನ್ಯರೆ, ಒಂದೆಡೆ ಕೆಲವರು ಕೊಡಗಿನ ಪರಿಸರ ಎಂದು ಹೋರಾಡುತ್ತಾರೆ. ಹಾರಾಡುತ್ತಾರೆ. ಮತ್ತೊಂದೆಡೆ ಇನ್ನೂ ಕೆಲವರು ನಮ್ಮ ನೆಲ-ನಮ್ಮ ಜನವೆನ್ನುತ್ತಾರೆ. ಇನ್ನೊಂದೆಡೆ ನಾವು ವಿದೇಶಿಯರ ದಾಸರಾಗುತ್ತಿದ್ದೇವೆ. ಇದಕ್ಕೆ ಮೂಕ ಸಾಕ್ಷಿ ಮೂರ್ನಾಡು ಸಮೀಪದ ಪಾಲೇಮಾಡಿನಲ್ಲಿ ನಿರ್ಮಾಣವಾಗಲಿರುವ ಕ್ರಿಕೆಟ್ ಕ್ರೀಡಾಂಗಣ?!

ಕ್ರಿಕೆಟ್ ನಮ್ಮ ದೇಶಿಯ ಕ್ರೀಡೆಯೇನೂ ಅಲ್ಲ. ಆದರೂ ನಾವು ಅದಕ್ಕೆ ಆಸರೆಯಾಗಿದ್ದೇವೆ. ಸಚಿನ್ ಅನ್ನು ‘ದೇವರು’ ಎನ್ನುತ್ತೇವೆ?! ಈ ಕ್ರೀಡೆ ನಮ್ಮ ಅಮೂಲ್ಯ ಸಮಯ, ಧನ, ಅಪಾರ ಪ್ರಮಾಣದ ವಿದ್ಯುತ್ ಅನ್ನು ವ್ಯರ್ಥವಾಗಿ ಪೋಲು ಮಾಡುವ ಕ್ರೀಡೆ. ಆದರೂ ಅದಕ್ಕೆ ಇನ್ನಿಲ್ಲದ ಗೌರವ. ಮತ್ತೊಂದೆಡೆ ಕ್ರಿಕೆಟ್‍ಗಾಗಿ ಬೆಟ್ಟಿಂಗ್.

ಇದಕ್ಕಾಗಿಯೇ ನಾವು ಪಾಲೇಮಾಡಿನ ನಿವಾಸಿಗಳು ಜನತೆಯ ಆಶೋತ್ತರಗಳನ್ನು ಬದಿಗೊತ್ತಿ ಅಲ್ಲಿ ಕ್ರಿಕೆಟ್‍ಗಾಗಿ ಕ್ರೀಡಾಂಗಣ ಮತ್ತು ಈಜುಕೊಳ ನಿರ್ಮಾಣದ ಕ್ರಿಯಾ ಯೋಜನೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ಇಲ್ಲಿ ಏಕಪಕ್ಷೀಯವಾಗಿ ಬಹುಜನರ ಆಶೋತ್ತರಗಳಿಗೆ ವಿರುದ್ಧವಾಗಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಪರಿಸರವಾದಿಗಳ ಪ್ರಬಲ ವಿರೋಧವೂ ಇದೆ. ಸ್ಥಳೀಯರಿಗೆ ಸ್ಮಶಾನಕ್ಕಾಗಿ ಜಾಗ ಪೂರ್ತಿ ಕೊಡಲು ಸಾಧ್ಯವಾಗದ ಪಕ್ಷದಲ್ಲಿ ಅಲ್ಲಿ ವಿದ್ಯಾಸಂಸ್ಥೆಗಳೋ, ಅನಾಥ ಆಶ್ರಮ, ಜಿಲ್ಲೆಯ ಹೆಮ್ಮೆಯ ಸೇನೆಯ ಸೈನಿಕರ ವಿಧವೆಯ ಪತ್ನಿಯರಿಗೆ ನಿವೇಶನ ಮಾಡಿ ಹಂಚಲು ಆ ಜಾಗವನ್ನು ಮೀಸಲಿಡಬಹುದಲ್ಲವೆ!? ಈ ಬಗ್ಗೆ ಜಿಲ್ಲೆಯ ಜನತೆ, ರಾಜಕೀಯ ಪಕ್ಷಗಳು ನಿಸ್ವಾರ್ಥವಾಗಿ ಚಿಂತನೆ ನಡೆಸುವ ಅಗತ್ಯವಿದೆ.

- ಗ್ರೇಸಿ ವಿಜಯ, ಪಾಲೇಮಾಡು-ಹೊದ್ದೂರು.