ಮಾನ್ಯರೆ,

ಬೇಸಿಗೆ ಕಾಲ ಬಂದಾಗ ಪ್ರತಿಯೊಬ್ಬರು ಬಾಯಿ ಬಡಿದುಕೊಳ್ಳುವದು ನೀರಿಗಾಗಿ. ಇದಕ್ಕೆ ಸುಲಭದಲ್ಲಿ ಉತ್ತರ ಭೀಕರ ಬರಗಾಲ. ಇದನ್ನು ನಿಧಾನವಾಗಿ ಯೋಚಿಸಿದರೆ ನಿಜವು ತಿಳಿಯುವದು. ನೀರಿಗೆ ಮೂಲ ಕಾಡು. ಅಂದರೆ ನಿರ್ಜನ ಪ್ರದೇಶ. ಯಾವದೇ ನದಿಗಳಾಗಲಿ, ತೋಡು-ತೊರೆಗಳಾಗಲಿ ಅಥವಾ ನೀರಿನ ಬುಗ್ಗೆಗಳಾಗಲಿ ತಂಪಾದ ಜಾಗದಲ್ಲಿ ಹುಟ್ಟಿ ಹರಿಯಲು ಶುರು ಮಾಡುತ್ತದೆ. ಪ್ರಕೃತಿ ದೇವಿಯು ತನ್ನ ಒಡಲೊಳಗೆ ಜೀವರಾಶಿಗಳಿಗೆ ಬೇಕಾದ ನೀರನ್ನು ಇಟ್ಟುಕೊಂಡು ಭೂಮಿಯ ಮೇಲೆ ಹರಿಯಲು ಅಲ್ಲಲ್ಲಿ ಗಿರಿಕಂದರಗಳ ಮೂಲಕ ಪೂರೈಕೆ ಮಾಡುತ್ತಿತ್ತು. ಭೂಮಿಯಿಂದ ಆವಿಯಾಗಿದ್ದ ನೀರನ್ನು ಮೋಡವಾಗಿ ಶೇಖರಿಸಿ ಆಯಾಯ ಪ್ರದೇಶಗಳಿಗೆ ಋತುಮಾನಕ್ಕೆ ಸರಿಯಾಗಿ ಮಳೆಯಾಗಿ ಭೂಮಿಗೆ ಬೀಳಿಸುತ್ತಿತ್ತು. ಇದು ಪ್ರಕೃತಿಯ ನಿಯಮ.

ಆದರೆ ಜನಸಂಖ್ಯಾ ಸ್ಫೋಟದಿಂದ ಹಾಗೂ ಕೈಗಾರಿಕಾ ಆಂದೋಲನದಿಂದ ಸ್ವಾಭಾವಿಕವಾಗಿ ದೊರೆಯುವ ನೀರನ್ನು ಹೇರಳವಾಗಿ ಪಡೆಯಲು ಯಂತ್ರವನ್ನು ಬಳಸಿ ಭೂದೇವಿಯ ಒಡಲಲ್ಲಿ ಇರುವ ನೀರನ್ನು ಬಗೆದು ತೆಗೆದು ಇತಿಮಿತಿ ಇಲ್ಲದೆ ಉಪಯೋಗಿಸಲು ಶುರು ಮಾಡಿದ್ದು ಒಂದು ಕಾರಣ. ಜನಸಂಖ್ಯೆಯ ಏರಿಕೆಯನ್ನು ಕ್ರಮಬದ್ಧವಾಗಿ ತಡೆಯದೆ ಹುಟ್ಟಿದ ಪ್ರತಿಯೊಬ್ಬರಿಗೂ ನಿವೇಶನ ಮತ್ತು ಜಾಗ ಹಂಚಲು ಮೀಸಲಾಗಿಟ್ಟಿದ್ದ ಕಾಡು ಜಾಗ, ಊರುಡುವೆ, ದೇವರಕಾಡು, ಜಾತ್ರೆಮಾಳ, ಪೈಸಾರಿ ಹೀಗೆ ಸಾರ್ವಜನಿಕ ಉಪಯೋಗಕ್ಕಾಗಿ ಇರುವ ಜಾಗವನ್ನು ಮಂಜೂರು ಮಾಡಿ, ಅಥವಾ ಒತ್ತುವರಿ ಮಾಡಿದವರನ್ನು ಸಕ್ರಮ ಮಾಡಿ ಕಾಡನ್ನು ಬಯಲು ಮಾಡಿದ್ದೇ ನೀರಿನ ಬವಣೆಗೆ ಕಾರಣ. ಇವತ್ತು ಹಿಂದೆ ಮಾಡಿದ ಕಾನೂನುಗಳನ್ನು ಬದಲಾಯಿಸಿ, ಓಟಿನ ಆಸೆಗೆ ಅಲ್ಲಲ್ಲಿ ಜನರನ್ನು ಮಿತಿ ಮೀರಿದ ಆಸೆ ತೋರಿಸಿ ಗೊತ್ತುಗುರಿ ಇಲ್ಲದೆ ನೆಮ್ಮದಿಯಿಂದ ಕೆಲಸ ಮಾಡುವಂತಹ ಮುಗ್ಧ ಜನರಿಗೆ ಫೋರ ಅನ್ಯಾಯ ಮಾಡಿರುತ್ತಾರೆ. ಹೀಗಾಗಿ ಕುಡಿಯುವ ನೀರಿಗಾಗಿ ಮನುಷ್ಯನೊಂದಿಗೆ ಜೀವ ಸಂಕುಲ ಪರದಾಡುವಂತಾಗಿದೆ.

- ಪಿ.ಜಿ. ಮುತ್ತಪ್ಪ, ಮೂರ್ನಾಡು.