ಸೋಮವಾರಪೇಟೆ, ಫೆ. 1: ಸಮೀಪದ ಗೌಡಳ್ಳಿ ಗ್ರಾಮದಲ್ಲಿರುವ ಗೌಡಳ್ಳಿ ವಿದ್ಯಾಸಂಸ್ಥೆ ಹಾಗೂ ಆದಿಚುಂಚನಗಿರಿ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಗೌಡಳ್ಳಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವವನ್ನು ಫೆ. 27 ರಂದು ವಿವಿಧ ಕಾರ್ಯಕ್ರಮಗ ಳೊಂದಿಗೆ ಆಚರಿಸಲಾಗುವದು ಎಂದು ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಬಿ. ಭರತ್ಕುಮಾರ್ ಹೇಳಿದರು.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, 1966 ರಲ್ಲಿ ವಿ.ಟಿ. ವೀರಪ್ಪನವರು, ಸಿ.ಕೆ. ಕಾಳಪ್ಪನವರು ಸೇರಿದಂತೆ ಪ್ರಮುಖರ ಸಹಕಾರದೊಂದಿಗೆ ಆರಂಭಿಸಿದ ವಿದ್ಯಾಸಂಸ್ಥೆಯು 50ನೇ ವರ್ಷದ ಹೊಸ್ತಿಲಿನಲ್ಲಿದೆ. ಇದರ ಅಂಗವಾಗಿ ಸುವರ್ಣ ಮಹೋತ್ಸವಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಅದೇ ಸಮಾರಂಭ ದಲ್ಲಿ ವಿದ್ಯಾಸಂಸ್ಥೆಯನ್ನು ಆದಿಚುಂಚನಗಿರಿ ಮಹಾಸಂಸ್ಥಾನ ದೊಂದಿಗೆ ವಿಲೀನ ಹಾಗೂ ಗುರುವಂದನಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಾರಂಭಕ್ಕೆ ಆಗಮಿಸುವ ಆದಿ ಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಹಾಗೂ ಆದಿ ಚುಂಚನಗಿರಿ ಮಹಾಸಂಸ್ಥಾನದ ಹಾಸನ-ಕೊಡಗು ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥ ಸ್ವಾಮೀಜಿಗಳನ್ನು ಬೆಳಿಗ್ಗೆ 9.30ಕ್ಕೆ ಬೀಟಿಕಟ್ಟೆ ಜಂಕ್ಷನ್ನಿಂದ ಶಾಲಾವರಣಕ್ಕೆ ಜಾನಪದ ಕಲಾತಂಡ, ಸುಮಾರು 500 ಮಂದಿ ಕಲಶ ಹೊತ್ತ ಮಹಿಳೆಯರಿಂದ ಪೂರ್ಣ ಕುಂಭಮೇಳ ಹಾಗೂ ವಾದ್ಯಗೋಷ್ಠಿ ಯೊಂದಿಗೆ ಮೆರವಣಿಗೆಯೊಂದಿಗೆ ಕರೆ ತರಲಾಗುವದು ಎಂದರು.
ನಂತರ ಶಾಲಾ ಆವರಣದಲ್ಲಿ ನಿರ್ಮಿಸಿರುವ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷ ವಿ.ಟಿ. ವೀರಪ್ಪನವರ ಪುತ್ಥಳಿಯ ಅನಾವರಣ ಕಾರ್ಯ ನಡೆಯಲಿದೆ ಎಂದರು.
ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಶಾಖಾ ಮಠದ ಮಠಾಧೀಶ ಶಂಭುನಾಥ ಸ್ವಾಮೀಜಿ, ಮಾಜಿ ಮುಖ್ಯ ಮಂತ್ರಿಗಳಾದ ಹೆಚ್.ಡಿ. ಕುಮಾರ ಸ್ವಾಮಿ, ಸ್ಥಳೀಯ ಶಾಸಕರುಗಳು, ಸಂಸದರುಗಳಾದ ಪ್ರತಾಪ್ ಸಿಂಹ, ಸದಾನಂದಗೌಡ, ಮಾಜಿ ಸಚಿವ ಬಿ.ಎ. ಜೀವಿಜಯ, ವೀರಶೈವ ಮಹಾ ಸಭಾದ ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪ ಸೇರಿದಂತೆ ಪ್ರಮುಖರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾರಂಭದಲ್ಲಿ ವಿದ್ಯಾಸಂಸ್ಥೆ ಯಲ್ಲಿ ಸೇವೆ ಸಲ್ಲಿಸಿದ್ದ ಅಧ್ಯಕ್ಷರುಗಳನ್ನು ಹಾಗೂ ಮುಖ್ಯೋಪಾಧ್ಯಾಯರು ಗಳನ್ನು ಸನ್ಮಾನಿಸಲಾಗುವದು.
ಇದೇ ಸಮಾರಂಭದಲ್ಲಿ ಹಳೇ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ ನಡೆಯಲಿದ್ದು, ಗೌಡಳ್ಳಿ ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವದು ಎಂದರು.
ಅಂದು ರಾತ್ರಿ 8 ಗಂಟೆಯಿಂದ ಖ್ಯಾತ ಹಾಸ್ಯ ಕಲಾವಿದ ಪ್ರಾಣೇಶ್ ಗಂಗಾವತಿ ಮತ್ತು ತಂಡದವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಎನ್. ನಾಗರಾಜ್, ನಿರ್ದೇಶಕರು ಗಳಾದ ಹೆಚ್.ಆರ್. ಮುತ್ತಣ್ಣ, ಹೆಚ್.ಇ. ಪುಟ್ಟರಾಜ್ ಹಾಗೂ ಜಿ.ಎನ್. ವೀರಭದ್ರಪ್ಪ ಇದ್ದರು.