ನಾಪೋಕ್ಲು, ಫೆ. 1: ಭಗವಂತನು ಯಾವ ರೂಪದಲ್ಲೂ ಕಾಣಸಿಗುತ್ತಾನೆ. ಅದು ಯಾವ ರೀತಿ ಎಂಬದಿಲ್ಲ. ಭಕ್ತಿ,ಪ್ರೀತಿ, ಶ್ರದ್ಧೆ, ಶ್ರಮ ಇದ್ದಲ್ಲಿ ಭಗವಂತ ಇದ್ದೆ ಇದ್ದಾನೆ. ಪ್ರತಿಯೊಬ್ಬ ಮನುಷ್ಯನ ಯಶಸ್ಸಿನಿ ಗುಟ್ಟು ಭಗವಂತನಲ್ಲಿ ಅಡಗಿರುತ್ತದೆ. ದೇವರೊಂದಿಗೆ ನಮ್ಮ ಹೃದಯಗಳನ್ನು ಶೃತಿಗೊಳಿಸಿದಾಗ ಮನುಷ್ಯನಂತಹ ಹೊಂಗಿರಣಗಳು ಹೊರಹೊಮ್ಮುತ್ತವೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹಾಗೂ ತೂಗುಸೇತುವೆ ಸರದಾರ ಗಿರೀಶ್ ಭಾರಧ್ವಾಜ್ ಹೇಳಿದರು.
ಅವರು ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ನವೀಕರಣ ಪುನರ್ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಡೆದ ಐದನೇ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದರು.
ಧಾರ್ಮಿಕ ಉಪನ್ಯಾಸವನ್ನು ಹಿರಣ್ಯ ವೆಂಕಟೇಶ್ ಭಟ್ ಕಾಸರಗೋಡು ನೀಡಿ, ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಗಟ್ಟಿನಲ್ಲಿ ದೇವಾಲಯಗಳ ನಿರ್ಮಾಣ ಅಗತ್ಯ. ಜೀವ ಮತ್ತು ದೇಹಗಳಂತೆ ದೇವಾಲಯ. ನಮ್ಮ ಜೀವದಂತೆ ದೇವಾಲಯಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯತೆ ಇದೆ ಎಂದರು.
ಅಧ್ಯಕ್ಷತೆಯನ್ನು ಸುಳ್ಯ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಎ. ಜ್ಞಾನೇಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ.ಅಧ್ಯಕ್ಷ ಹರೀಶ್ ಬಿ.ಎ.,ಧ.ಗ್ರಾ.ಯೋಜನೆಯ ನಿರ್ದೇಶಕ ಸೀತಾರಾಮ ಶೆಟ್ಟಿ, ಮದರಾಸು ವಿಶ್ವವಿದ್ಯಾಲಯ ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೋಡಿ ಕುಶಾಲಪ್ಪ ಗೌಡ, ಸುಳ್ಯ ಎ.ಒ.ಎಲ್.ಇ ಕಾರ್ಯದರ್ಶಿ ರೇಣುಕಾ ಪ್ರಸಾದ್, ನಿವೃತ್ತ ಪ್ರಾಂಶುಪಾಲ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಕೆ.ಆರ್.ಗಂಗಾಧರ್, ಮಾಜಿ ಮೊಕ್ತೇಸರ ಪದ್ಮಯ್ಯ ಕುಂದಲ್ಪಾಡಿ ಭಾಗವಹಿಸಿದ್ದರು. ಈ ಸಂದರ್ಭ ಭಾರತ ಸರಕಾರದ ಶ್ರೇಷ್ಠ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಹಾಗೂ ತೂಗುಸೇತುವೆ ಸರದಾರ ಗಿರೀಶ್ ಭಾರದ್ವಾಜ್ ಹಾಗೂ ಮದರಾಸು ವಿಶ್ವವಿದ್ಯಾಲಯ ನಿವೃತ್ತ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಕೋಡಿ ಕುಶಾಲಪ್ಪ ಗೌಡ ಅವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.
ದೇವತಕ್ಕರು ರಾಜಗೋಪಾಲ ರಾಮಕಜೆ, ಆಡಳಿತ ಮೊಕ್ತೇಸರ ನಾಗೇಶ್ ಕುಂದಲ್ಪಾಡಿ, ಕಾರ್ಯದರ್ಶಿ ವಿಶ್ವನಾಥ ಕುಂಬಳಚೇರಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಆರ್.ಡಿ ಆನಂದ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ನಿಡ್ಯಮಲೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರವೀಣ್ ಬಂಗಾರಕೋಡಿ, ಕಾರ್ಯದರ್ಶಿ ತಿಲೋತ್ತಮ ಅಡ್ಕ, ಆರ್ಥಿಕ ಸಮಿತಿ ಕಾರ್ಯದರ್ಶಿ ತೇಜಪ್ರಸಾದ್ ಎ.ಎಸ್, ಕೋಶಾಧಿಕಾರಿ ಹರಿಶ್ಚಂದ್ರ ಮುಡ್ಕಜೆ, ಸಭಾಕಾರ್ಯಕ್ರಮ ಸಮಿತಿಯ ಸಂಚಾಲಕ ಪುರುಷೋತ್ತಮ ಕಿರ್ಲಾಯ, ದೇವತಕ್ಕ ಮುಖ್ಯಸ್ಥರು ಮೊದಲಾದವರು ಉಪಸ್ಥಿತರಿದ್ದರು. ಪೆರಾಜೆ ಗ್ರಾ.ಪಂ.ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ ವಂದಿಸಿದರು. ಉಪನ್ಯಾಸಕ ಪ್ರಸನ್ನ ನಿಡ್ಯಮಲೆ ಹಾಗೂ ಮನೋಜ್ ನಿಡ್ಯಮಲೆ, ರಕ್ಷಿತ್ ಬಿ.ಎಸ್. ಬಂಗಾರಕೋಡಿ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಭಕ್ತಿ ಭಾವ ಸಂಗೀತ ವೈಭವ ಮತ್ತು ಅರೆಭಾಷೆ ಸಾಂಸ್ಕøತಿಕ ಕಲಾ ವೈಭವ ನಡೆಯಿತು.
-ದುಗ್ಗಳ ಸದಾನಂದ