ಸೋಮವಾರಪೇಟೆ, ಫೆ. 1: ಟೈಲರ್ ವೃತ್ತಿ ನಡೆಸುತ್ತಿರುವವರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವುಗಳಿಂದ ಮುಕ್ತಿಪಡೆಯಬೇಕಾದರೆ ಬಲಿಷ್ಠ ಸಂಘಟನೆ ಕಟ್ಟಬೇಕು ಎಂದು ಟೈಲರ್ಸ್ ಅಸೋಸಿಯೇಷನ್‍ನ ಜಿಲ್ಲಾಧ್ಯಕ್ಷ ಬಿ.ಎನ್. ಮಂಜುನಾಥ್ ಅಭಿಪ್ರಾಯಿಸಿದರು.

ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್‍ನ ಸೋಮವಾರಪೇಟೆ ಕ್ಷೇತ್ರ ಸಮಿತಿಯ ವಾರ್ಷಿಕ ಮಹಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಟೈಲರ್ ವೃತ್ತಿಯವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾದಲ್ಲಿ, ಬಲಿಷ್ಠ ಸಂಘವನ್ನು ಕಟ್ಟಬೇಕಿದೆ. ಆಗ ಮಾತ್ರ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯ. ಸಂಘವನ್ನು ಮತ್ತಷ್ಟು ಸಂಘಟಿಸುವ ದೃಷ್ಟಿಯಿಂದ ವೃತ್ತಿ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯತ್ವವನ್ನು ಪಡೆಯಬೇಕು ಎಂದರು.

ವೃತ್ತಿಯಲ್ಲಿ ಹಲವು ಸಮಸ್ಯೆಗಳಿರುವದರಿಂದ ಹೆಚ್ಚಿನವರು ಟೈಲರ್‍ಗಳಾಗಲು ಇಷ್ಟಪಡದೆ ಇತರ ವೃತ್ತಿಯತ್ತ ತೆರಳುತ್ತಿದ್ದಾರೆ. ಅಲ್ಲದೆ, ಹೊಸದಾಗಿ ಯಾರೂ ಕೆಲಸವನ್ನು ಕಲಿಯಲು ಮುಂದೆ ಬರುತ್ತಿಲ್ಲ. ಇದನ್ನು ಮನಗಂಡಿರುವ ರಾಜ್ಯ ಸಮಿತಿ ಫೆಬ್ರವರಿಯಲ್ಲಿ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಸಂದರ್ಭ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಪರಿಹರಿಸಲು ಮನವಿ ಸಲ್ಲಿಸಲಾಗುವದು. ಈ ಪ್ರತಿಭಟನೆಗೆ ಜಿಲ್ಲೆಯ ಹೆಚ್ಚಿನ ವೃತ್ತಿ ಬಾಂಧವರು ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಬಿ. ಗಿರೀಶ್ ಮಾತನಾಡಿ, ಸಂಘದ ಸದಸ್ಯರ ಅನುಕೂಲಕ್ಕಾಗಿ ಮರಣ ನಿಧಿಯನ್ನು ಜಾರಿಗೆ ತಂದಿದ್ದು, ಮೃತಪಟ್ಟ ಕುಟುಂಬದ ಸದಸ್ಯರಿಗೆ 2500 ರೂ.ಗಳನ್ನು ನೀಡುತ್ತಿದೆ. ಸಂಘದ ಎಲ್ಲ ಕಾರ್ಯಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸುವ ಮೂಲಕ ಸಂಘದ ಅಭಿವೃದ್ಧಿಗೆ ಮುಂದಾಗಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಸಮಿತಿ ಉಪಾಧ್ಯಕ್ಷ ಬಿ.ವೈ. ಗಂಗಾಧರ್, ಕ್ಷೇತ್ರ ಸಮಿತಿ ಮಹಿಳಾ ಘಟಕದ ಉಪಾಧ್ಯಕ್ಷೆ ಅನಿತಾ ಶೆಟ್ಟಿ, ಪದಾಧಿಕಾರಿಗಳಾದ ಎಸ್.ಸಿ. ನಂದೀಶ್, ಬಿ.ಎಸ್. ಕುಮಾರ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ಸಂಘದ ಸದಸ್ಯರಾದ ಲಿಂಗಪ್ಪರವರನ್ನು ಸನ್ಮಾನಿಸಲಾಯಿತು. ಆಜೀವ ಸದಸ್ಯರಿಗೆ ಹಾಗೂ ನೂತನ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.