ಸುಂಟಿಕೊಪ್ಪ, ಡಿ. 2: ಹೊಸತೋಟದಲ್ಲಿ ‘ಸ್ವಸ್ಥ’ ಸಮಾಜ ನಿರ್ಮಿಸಲು ಹೋರಾಟ ನಡೆಸುತ್ತಿರುವ ಗ್ರಾ.ಪಂ. ಸದಸ್ಯರ ಮೇಲೆ ಕೋಮುವಾದಿಗಳು ಹಲ್ಲೆ ನಡೆಸಿದ್ದು ಖಂಡನೀಯ ಎಂದು ಕಾಂಗ್ರೆಸ್‍ನ ಜಿಲ್ಲಾ ಕಾರ್ಮಿಕ ಸಂಘದ ಅಧ್ಯಕ್ಷ ವಿ.ಪಿ.ಶಶಿಧರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಲ್ಲೆಗೀಡಾದ ಹೊಸತೋಟ ನಿವಾಸಿ ಪಂಚಾಯಿತಿ ಸದಸ್ಯ ಕೆ.ಪಿ. ದಿನೇಶ್ ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಒಳಗಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಐಗೂರು ಹಾಗೂ ಹೊಸತೋಟಗಳಲ್ಲಿ ಶಾಂತಿ ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸತೋಟದಲ್ಲಿ ಆನೇಕ ವರ್ಷಗಳಿಂದ ಕಿಡಿಗೇಡಿಗಳಿಂದ ಶಾಂತಿ ನೆಮ್ಮದಿಗೆ ಭಂಗವಾಗುತ್ತಿದೆ. ಗ್ರಾ.ಪಂ. ಸದಸ್ಯ ಕೆ.ಪಿ.ದಿನೇಶ್ ಊರಿನಲ್ಲಿ ಶಾಂತಿ ನೆಲೆಸಲು ಶ್ರಮಿಸುತ್ತಿದ್ದಾರೆ. ಪೊಲೀಸರು ಇಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಐಗೂರಿನಲ್ಲಿ ಶಿವಾಜಿ ಸೇನೆ ಹೆಸರಿನಲ್ಲಿ ಜನರು ಅಶಾಂತಿ ನಿರ್ಮಿಸಲು ಮುಂದಾಗಿದ್ದಾರೆ. ಇವರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆಯೂ ಆನೇಕ ಬಾರಿ ದಿನೇಶ್ ಮೇಲೆ ಇವರಿಂದ ಹಲ್ಲೆಯಾಗಿದೆ ಎಂದು ಆರೋಪಿಸಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಮಾತನಾಡಿ, ಐಗೂರು ಗ್ರಾಮ ಸೂಕ್ಷ್ಮ ಪ್ರದೇಶವಾಗಿದೆ. ಕೆಲ ಕಿಡಿಗೇಡಿಗಳಿಂದ ಶಾಂತಿ ಕದಡುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತನ ಮೇಲೆ ನಡೆದ ಹಲ್ಲೆಯನ್ನು ಕಾಂಗ್ರೆಸ್ ಖಂಡಿಸುತ್ತದೆ. ಮುಂದೆ ಈ ಘಟನೆಗಳು ಮುಂದುವರೆದರೆ ಪಕ್ಷದಿಂದ ಹೋರಾಟ ನಡೆಸಲಾಗುವದೆಂದು ತಿಳಿಸಿದರು.

ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಘಟನೆಯನ್ನು ಖಂಡಿಸಿದರು.

ಈ ಸಂದರ್ಭ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ. ರಾಯ್, ಆರ್.ಎಂ.ಸಿ. ಸದಸ್ಯ ಎಂ.ಎನ್. ಅಶೋಕ್, ಪಂಚಾಯಿತಿ ಸದಸ್ಯ ಗೋಪಾಲ್, ಗ್ರಾಮಸ್ಥರಾದ ಎಂ.ಪಿ. ಧರ್ಮಪ್ಪ, ಎಸ್.ಎನ್. ಯೋಗೇಶ್, ವಿಶ್ವನಾಥ ಶೆಟ್ಟಿ, ಅವ್ವಪ್ಪ, ಆಪ್ಪೀಸ್, ರವಿ ಬಾರನ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಕೆ.ಇ.ಕರೀಂ, ಪರಿಶಿಷ್ಟ ಜಾತಿ ಪಂಗಡದ ಅಧ್ಯಕ್ಷ ಎಂ.ಎಸ್.ರವಿ ಮತ್ತಿತರರು ಇದ್ದರು.