ಮಡಿಕೇರಿ, ನ. 19: ಪ್ರೊ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕ ಹಾಗೂ ವಲ್ರ್ಡ್ ನಾಲೆಡ್ಜ್ ಡೇ ಸೆಲಬರೇಷನ್ ಟೀಂನ ಸಂಯುಕ್ತ ಆಶ್ರಯದಲ್ಲಿ ತಾ. 27ರಂದು ದಲಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ 27ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಹಾಗೂ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅವರುಗಳು, ಸಮಿತಿಯು ಕಳೆದ 26 ವರ್ಷಗಳಿಂದ ದಲಿತ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಅನೇಕ ವಿದ್ಯಾರ್ಥಿಗಳು ಉನ್ನತ ವ್ಯಾಸಂಗದ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಕೂಡಾ ಸನ್ಮಾನಿಸಲಾಗುತ್ತಿದ್ದು, ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತಂದು ಕೊಡುವ ಸರಕಾರಿ ಶಾಲೆಗಳ ಶಿಕ್ಷಕರುಗಳನ್ನು ಕೂಡಾ ಸಮಿತಿ ಸನ್ಮಾನಿಸುತ್ತಾ ಬರುತ್ತಿದೆ. ದಲಿತ ಸಮುದಾಯದ ಸಮಸ್ಯೆಗಳಿಗೆ ಸಮಿತಿ ಸ್ಪಂದಿಸುತ್ತಿರುವದಲ್ಲದೆ ಹೋರಾಟಗಳನ್ನೂ ನಡೆಸುತ್ತಿದೆ. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಮಿತಿ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದ್ದು, ದಲಿತ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್‍ನಂತಹ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂಬದು ಸಮಿತಿಯ ಆಶಯವಾಗಿದೆ ಎಂದರು.

ಸಮಿತಿ ವತಿಯಿಂದ 2015-16ನೇ ಸಾಲಿನಲ್ಲಿ 10ನೇ ತರಗತಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ದಲಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದ್ದು, ಅಂತಹ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಹಾಗೂ ಜಾತಿ ದೃಢೀಕರಣ ಪತ್ರದೊಂದಿಗೆ ಅರ್ಜಿಗಳನ್ನು ತಾ. 23 ರೊಳಗೆ ಹೆಚ್.ಎಲ್. ದಿವಾಕರ್, ಜಿಲ್ಲಾ ಸಂಚಾಲಕರು, ದಲಿತ ಸಂಘರ್ಷ ಸಮಿತಿ, ಅಶೋಕಪುರ, ಮಡಿಕೇರಿ. ಈ ವಿಳಾಸಕ್ಕೆ ತಲಪುವಂತೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 94815 23648 ನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಸದಸ್ಯತ್ವ ಅಭಿಯಾನ: ದಲಿತ ಸಂಘರ್ಷ ಸಮಿತಿಯು ಪ್ರಸಕ್ತ ಸುಮಾರು 5 ಸಾವಿರ ಮಂದಿ ಸದಸ್ಯರನ್ನು ಹೊಂದಿದ್ದು, ಈ ಸದಸ್ಯರ ನವೀಕರಣದ ಜೊತೆ ಪ್ರಸಕ್ತ ಸಾಲಿನಲ್ಲಿ ಸುಮಾರು 15 ಸಾವಿರ ಮಂದಿ ಸದಸ್ಯರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ದಿವಾಕರ್ ಹೇಳಿದರು. ಸಮಿತಿಯ ಸದಸ್ಯರು ಮನೆ ಮನೆಗಳಿಗೆ ತೆರಳಿ ಅಂಬೇಡ್ಕರ್ ಹಾಗೂ ಬುದ್ಧನ ಸಂದೇಶಗಳ ನ್ನೊಳಗೊಂಡ ಕರಪತ್ರ ಹಾಗೂ ಕ್ಯಾಲೆಂಡರ್‍ಗಳನ್ನು ವಿತರಿಸುವ ಮೂಲಕ ದಲಿತರಲ್ಲಿ ಜಾಗೃತಿ ಮೂಡಿಸಿ ಸದಸ್ಯತ್ವ ನೋಂದಣಿ ಮಾಡಲಿದೆ. ಮುಂದಿನ ಫೆಬ್ರವರಿ ತಿಂಗಳಿನಲ್ಲಿ ಮಡಿಕೇರಿಯಲ್ಲಿ ಸುಮಾರು 10 ಸಾವಿರ ದಲಿತರ ಸಮಾವೇಶವೊಂದನ್ನು ಆಯೋಜಿಸ ಲಾಗುವದು ಎಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಸಂಘಟನಾ ಸಂಚಾಲಕ ಹೆಚ್.ಎ. ರವಿ ಹಾಗೂ ಮೇಕೇರಿ ಗ್ರಾಮ ಸಂಚಾಲಕ ಎ.ಪಿ. ದೀಪಕ್ ಹಾಜರಿದ್ದರು.