ಕೂಡಿಗೆ, ನ. 19: ಗ್ರಾಮೀಣ ಸೊಗಡನ್ನು ಬಿಂಬಿಸುವ ಹಾಗೂ ಪುರಾತನ ಸಂಸ್ಕøತಿ, ಲಕ್ಷ್ಮೀಪೂಜೆ, ಬಲಿಪಾಡ್ಯಮಿಯ ಹಾಗೂ ನರಕ ಚತುರ್ಥಿಯ ಕಾರ್ತಿಕ ಮಾಸದ ಪೂಜೋತ್ಸವದ ಮುಖೇನ ವಿಶೇಷ ರೀತಿಯಲ್ಲಿ ಹೋಬಳಿ ವ್ಯಾಪ್ತಿಯ ಶಿರಂಗಾಲ, ತೊರೆನೂರು, ಹೆಬ್ಬಾಲೆ, ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಗಳಲ್ಲಿ ರೈತರುಗಳು ತಮ್ಮ ದನ-ಕರುಗಳನ್ನು ತೊಳೆದು ಅವುಗಳನ್ನು ಸಿಂಗರಿಸಿ, ಪೂಜಿಸಿ ಹಳ್ಳಿಯ ಸೊಗಡನ್ನು ಬಿಂಬಿಸುವ ರೀತಿ ದೀಪಾವಳಿ ಹಬ್ಬವನ್ನು ಆಚರಿಸಿದರು. ಮಹಿಳೆಯರು ಮನೆಗಳನ್ನು ಸ್ವಚ್ಛಗೊಳಿಸಿ, ಮನೆಯಂಗಳದ ಮುಂಭಾಗದಲ್ಲಿ ವಿಶೇಷವಾಗಿ ರಂಗೋಲಿ ಬಿಡಿಸಿ, ಸಗಣಿಯ ಉಂಡೆಗೆ ಚೆಂಡು ಹೂವುಗಳನ್ನು ಇಟ್ಟು ದೀಪಾಲಂಕರ ಮಾಡುವದರ ಮೂಲಕ ದೀಪಾವಳಿ ಆಚರಿಸಿದರು. ಇದರ ಜೊತೆಯಲ್ಲಿ ಸಂಜೆಯ ಸಮಯ ಪಿತೃಪಕ್ಷದ ಮೂಲಕ ತಮ್ಮ ಆಚರಣೆಗಳನ್ನು ಮಾಡಿದರು.

ರೈತರು ತಮ್ಮ ಜಮೀನುಗಳಲ್ಲಿ ಮುಂದಿನ ಸಾಲಿನಲ್ಲಿ ಉತ್ತಮ ಮಳೆ ಬೆಳೆ ಬರಲಿ ಎಂಬ ಬಯಕೆಗೆ ಪುರಾತನ ಕಾಲದಿಂದ ನಡೆಸಿಕೊಂಡು ಬಂದಂತೆ ಅವರವರ ಜಮೀನಿಗೆ ತೆರಳಿ ಪೂಜೆ ಸಲ್ಲಿಸುವದು ವಿಶೇಷವಾಗಿತ್ತು. ಇದರ ಅಂಗವಾಗಿ ಮನೆಗಳಲ್ಲಿ ವಿಶೇಷ ಭೋಜನ ಮಾಡಿ ಕುಟುಂಬಸ್ಥರೊಂದಿಗೆ ಸಹಭೋಜನ ಮೂಲಕ ಹಬ್ಬ ಆಚರಣೆ ಮಾಡಿದರು.