ಮಡಿಕೇರಿ, ನ. 19: ಜಿಲ್ಲೆಯ ಕಂದಾಯ ಇಲಾಖೆಗಳಲ್ಲಿ ಭೂ ಮಂಜೂರಾತಿ ಕಡತಗಳ ವಿಲೇವಾರಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಅಕ್ರಮ ಭೂ ದಾಖಲೆಗಳನ್ನು ವಜಾಗೊಳಿಸಬೇಕೆಂದು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಬಬ್ಬಿರ ಸರಸ್ವತಿ ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂದಾಯ ಕಚೇರಿಗಳಲ್ಲಿ ಸಿಬ್ಬಂದಿಗಳ ಕೊರತೆ ಇರುವದರ ನಡುವೆಯೇ ಕರ್ತವ್ಯದಲ್ಲಿ ಇರುವವರು ಜನ ಸಾಮಾನ್ಯರ ಕೆಲಸ ಕಾರ್ಯಗಳಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ.

ಇದರಿಂದ ಜನ ಸಾಮಾನ್ಯರು ಸಣ್ಣ ಪುಟ್ಟ ಕೆಲಸಗಳಿಗಾಗಿ ಹಲವಾರು ಬಾರಿ ಕಂದಾಯ ಕಚೇರಿಗಳಿಗೆ ಅಲೆದಾಡುವÀ ಪರಿಸ್ಥಿತಿ ನಿರ್ಮಾಣವಾಗಿದೆ. ಕಡತವೊಂದು ಮತ್ತೊಂದು ಮೇಜಿಗೆ ಹೋಗಬೇಕಾದರು ಲಂಚ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಂದಾಯ ಇಲಾಖಾ ಸಿಬ್ಬಂದಿಗಳ ನಿರ್ಲಕ್ಷ್ಯ ಧೋರಣೆ ಒಂದೆಡೆಯಾದರೆ, ಮಧ್ಯವರ್ತಿಗಳ ಹಾವಳಿ ಸಾಕಷ್ಟು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದೆ.

ಪ್ರಸ್ತುತ ಜನ ಸಾಮಾನ್ಯರ ಮೂಲ ಕಡತಗಳನ್ನು ನಾಪತ್ತೆ ಮಾಡುವ ಮೂಲಕ ನಕಲಿ ಕಡತಗಳನ್ನು ಸೃಷ್ಟಿಸಿ ದಾಖಲಾತಿಗಳನ್ನು ಸಿದ್ಧಪಡಿಸಿ ಪರಭಾರೆ ಮಾಡುವ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂದರು.

ಇಲಾಖೆÉಗಳಲ್ಲಿ ಅಧಿಕಾರಿ ಹಾಗೂ ನೌಕರರ ಹೆಸರು, ಹುದ್ದೆ, ಮೊಬೈಲ್ ಸಂಖ್ಯೆಗಳನ್ನು ನಮೂದಿಸಿ ಸಾರ್ವಜನಿಕರ ಮಾಹಿತಿಗಾಗಿ ನಾಮಫಲಕ ಅಳವಡಿಸಲು ಹಾಗೂ ಇಲಾಖೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಕಂದಾಯ ಇಲಾಖೆಯ ಕಾರ್ಯ ಚಟುವಟಿಕೆಗಳಿಂದ ಸಂಕಷ್ಟಕ್ಕೆ ಒಳಗಾಗಿ ಅನ್ಯಾಯಕ್ಕೆ ಒಳಗಾದವರಿಗೆ ಪ್ರತಿಯೊಬ್ಬರು ನೆರವನ್ನು ನೀಡಬೇಕೆಂದು ಮನವಿ ಮಾಡಿದ ಬಬ್ಬೀರ ಸರಸ್ವತಿ, ಸಮಸ್ಯೆ ಎದುರಿಸುತ್ತಿರುವವರು ಮನೆಯಲ್ಲಿ ಕುಳಿತುಕೊಳ್ಳದೆ ನ್ಯಾಯಯುತ ಹೋರಾಟಕ್ಕೆ ಮುಂದಾಗಿ ಎಂದು ಕರೆ ನೀಡಿದರು.

ಯಾವದೇ ರಾಜಕೀಯ ಪಕ್ಷಗಳಲ್ಲಿ ಇರುವವರು ತಮ್ಮ ಪ್ರಭಾವದಿಂದ ಕಾನೂನು ಬಾಹಿರವಾದ ಚಟುವಟಿಕೆ, ಕುತಂತ್ರಗಳಿಗೆ ಬೆಂಬಲವನ್ನು ನೀಡದೆ, ಒಳ್ಳೆಯ ಕೆಲಸಗಳಿಗೆ ಬೆಂಬಲ ನೀಡುವಂತೆ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ಸಿ.ಎ. ತಮ್ಮಯ್ಯ, ಹೆಚ್.ಡಿ. ದಿಲೀಪ್ ಕುಮಾರ್ ಹಾಗೂ ಸೋಮವಾರಪೇಟೆಯ ವಿನೋದ್ ಉಪಸ್ಥಿತರಿದ್ದರು.