ಮಡಿಕೇರಿ, ಅ. 2: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವವು ಇಂದು ನಾಲ್ಕು ಶಕ್ತಿ ದೇವತೆಗಳ ಕರಗ ಪೂಜೆಯೊಂದಿಗೆ ಸಾಂಪ್ರದಾಯಿಕವಾಗಿ ಆರಂಭಗೊಂಡಿತು. ಪೂಜೆಯ ಬಳಿಕ ಕರಗ ದೇವತೆಗಳು ನಗರ ಪ್ರದಕ್ಷಿಣೆ ಆರಂಭಿಸುವದರೊಂದಿಗೆ ನವರಾತ್ರಿಯ ವಿವಿಧ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ದೊರೆಯಿತು.

ನಾಲ್ಕು ಶಕ್ತಿ ದೇವತೆಗಳಾದ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ, ಕಂಚಿ ಕಾಮಾಕ್ಷಿ ಮುತ್ತು ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕೋಟೆ ಮಾರಿಯಮ್ಮ ದೇಗುಲಗಳ ಕರಗಗಳನ್ನು ಪಂಪಿನಕೆರೆಯ ಬಳಿ ಹೂವಿನಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ಕರಗ ಉತ್ಸವ ಸಮಿತಿ, ದಸರಾ ಸಮಿತಿ, ದೇವಾಲಯಗಳ ಸಮಿತಿಗಳು, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ಪೂಜೆ ನೆರವೇರಿಸಲಾಯಿತು.

ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಾಲಯದ ಕರಗವನ್ನು ಪಿ.ಪಿ. ಚಾಮಿ, ದಂಡಿನ ಮಾರಿಯಮ್ಮ ಕರಗವನ್ನು ಜಿ.ಎ. ಉಮೇಶ್, ಕೋಟೆ ಮಾರಿಯಮ್ಮ ಕರಗವನ್ನು ಅನಿಶ್ ಕುಮಾರ್, ಕಂಚಿಕಾಮಾಕ್ಷಿಯಮ್ಮ ಕರಗವನ್ನು ನವೀನ್ ಕುಮಾರ್ ಹೊತ್ತಿದ್ದರು.

ಕರಗವನ್ನು ಹೊತ್ತ ವ್ರತಧಾರಿಗಳು ಬನ್ನಿಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮಲ್ಲಿಕಾರ್ಜುನ ನಗರ ಶ್ರೀ ಕೋದಂಡರಾಮ ದೇವಾಲಯ, ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ, ಪೇಟೆ ಶ್ರೀ ರಾಮಮಂದಿರಕ್ಕೆ ಆಗಮಿಸಿ ಸಂಪ್ರದಾಯಿಕ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ನಗರ ಪ್ರದಕ್ಷಿಣೆ ಹಾಕಿ ತಮ್ಮ ದೇವಾಲಯಗಳಿಗೆ ಕರಗ ಹಿಂತಿರುಗಿತು.

ಐತಿಹಾಸಿಕ ಹಿನ್ನೆಲೆಯಂತೆ ನಾಡಿನ ಸುಭಿಕ್ಷೆಗಾಗಿ ಕರಗ ದೇವತೆಗಳು ನಗರ ಪ್ರದಕ್ಷಿಣೆ ಮಾಡಲಿವೆ. ನಾಗರಿಕರು ಕರಗ ದೇವತೆಗಳಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಲಿದ್ದಾರೆ. ವಿಜಯ ದಶಮಿಯ ಮುಂಜಾನೆ ದಶಮಂಟಪಗಳೊಂದಿಗೆ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿದ ಬಳಿಕ ವಿಜಯದಶಮಿ ಉತ್ಸವಕ್ಕೆ ತೆರೆ ಬೀಳಲಿದೆ.

ಇಂದು ಕರಗ ದೇವತೆಗಳು ಸಾಗಿದ ಪ್ರಮುಖ ರಸ್ತೆಯಲ್ಲಿನ ನಿವಾಸಿಗಳು ಮನೆ ಎದುರು ವೈವಿಧ್ಯಮಯ ರಂಗೋಲಿಗಳನ್ನು ಹಾಕಿ ಬರಮಾಡಿಕೊಂಡರು.

ಪೂಜಾ ಸಂದರ್ಭ ವಿಧಾನ ಪರಿಷತ್ ಸದಸ್ಯರುಗಳಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ದಸರಾ ಸಮಿತಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಖಜಾಂಚಿ ಅನಿತಾ ಪೂವಯ್ಯ, ಗೌರವ ಕಾರ್ಯದರ್ಶಿ ಪುಷ್ಪಾವತಿ, ಗೌರವಾಧ್ಯಕ್ಷರುಗಳಾದ ಬೈ ಶ್ರೀ ಪ್ರಕಾಶ್, ಜಿ. ಚಿದ್ವಿಲಾಸ್, ರಾಬಿನ್ ದೇವಯ್ಯ, ಕಾರ್ಯದರ್ಶಿ ಗಿಲ್ಬರ್ಟ್ ಲೋಬೋ, ದಶಮಂಟಪ ಸಮಿತಿ ಅಧ್ಯಕ್ಷ ತೆಕ್ಕಡ ಕಾಶಿ ಕಾವೇರಪ್ಪ, ಅಲಂಕಾರ ಸಮಿತಿ ಅಧ್ಯಕ್ಷ ಜಗದೀಶ್, ದಸರಾ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು.