ಮಡಿಕೇರಿ, ಅ. 2: ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದು, ಅದರಂತೆ ಗಾಂಧಿ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕøತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 148ನೇ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ 112 ನೇ ಜನ್ಮ ದಿನಾಚರಣೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಸರ್ಕಾರ ಪ್ರತಿ ಜಿಲ್ಲೆಗಳಿಗೆ ತಲಾ ರೂ. 3 ಕೋಟಿ ವೆಚ್ಚದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಮುಂದಾಗಿದ್ದು, ನಗರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಕನಿಷ್ಟ ಒಂದು ಎಕರೆ ಭೂಮಿ ಬೇಕಿದೆ. ಆ ದಿಸೆಯಲ್ಲಿ ಆದ್ಯತೆ ಮೇಲೆ ಶೀಘ್ರ ಭೂಮಿ ಗುರುತಿಸಲಾಗುವದು ಎಂದು ಹೇಳಿದರು.

ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಗಾಂಧೀಜಿ ಸತ್ಯ, ಅಹಿಂಸೆ ಮತ್ತು ಮಾನವೀಯ ಮೌಲ್ಯಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಶ್ರಮಿಸಿದ ಮಹಾನ್ ಸುಧಾರಕ, ಗಾಂಧೀಜಿಯವರ ತತ್ವಗಳನ್ನು ವಿಶ್ವದಾದ್ಯಂತ ಮುಕ್ತವಾಗಿ ಅಳವಡಿಸಿಕೊಳ್ಳುವಂತಾಗಬೇಕು. ವಿಶೇಷವಾಗಿ ವಿದ್ಯಾರ್ಥಿಗಳು ಗಾಂಧೀಜಿಯವರ ಸತ್ಯ, ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುವಂತಾಗಬೇಕು.

ದೇಶದಲ್ಲಿ ಐಕ್ಯತೆ ಮತ್ತು ಏಕತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದ ಗಾಂಧೀಜಿ ಸಮಾಜದಲ್ಲಿನ ಜಾತೀಯತೆ ಹಾಗೂ ಅಸ್ಪøಶ್ಯತೆ ನಿವಾರಣೆಗೆ ಪ್ರಯತ್ನಿಸಿದರು ಎಂದು ಸ್ಮರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಮಾತನಾಡಿ, ಗಾಂಧೀಜಿ ಅವರು ಭಾರತ ರಾಷ್ಟ್ರ ನಿರ್ಮಾಣದಲ್ಲಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿದವರು, ಗಾಂಧೀಜಿ ಕಂಡ ಕನಸನ್ನು ನನಸು ಮಾಡಲು ಎಲ್ಲರೂ ಶ್ರಮಿಸಬೇಕು. ಗಾಂಧೀಜಿಯವರ ಗ್ರಾಮ ಸ್ವರಾಜ್ ಪರಿಕಲ್ಪನೆ ಗ್ರಾಮಗಳ ಅಭ್ಯುದಯಕ್ಕೆ ಪ್ರೇರಣೆ ಎಂದು ಬಣ್ಣಿಸಿದರು.

ಮಹಾತ್ಮ ಗಾಂಧೀಜಿ ಜನ್ಮ ದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ‘ನಮ್ಮ ಗಾಂಧಿ ತಾತಾ’, ‘ನನ್ನ ಜೀವನವೇ ನನ್ನ ಸಂದೇಶ’ ಕುರಿತು ಹೊರತರಲಾಗಿರುವ ಕಿರುಹೊತ್ತಿಗೆ ಹಾಗೂ ವಿಶೇಷ ಸಂಚಿಕೆಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಕುಳ್ಳಯ್ಯ, ಸರ್ವೋದಯ ಸಮಿತಿ ಸದಸ್ಯರಾದ ಕೆ.ಟಿ. ಬೇಬಿ ಮ್ಯಾಥ್ಯು, ಕೋಡಿ ಚಂದ್ರಶೇಖರ, ಅಂಬೆಕಲ್ ಕುಶಾಲಪ್ಪ, ಅಂಬೆಕಲ್ ನವೀನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ರವಿ, ಪೊಲೀಸ್ ಇನ್ಸ್‍ಪೆಕ್ಟರ್ ಮೇದಪ್ಪ, ಭಾರತೀಯ ಸೇವಾ ದಳದ ಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ನಿರೂಪಿಸಿ, ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಕಾರ್ಯದರ್ಶಿ ಎಂ. ಡೈಸಿ ಫ್ರಾನ್ಸಿಸ್ ಪ್ರಾರ್ಥಿಸಿದರೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಕೆ.ವಿ. ಸುರೇಶ್ ಸ್ವಾಗತಿಸಿದರು. ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ. ಜಗನ್ನಾಥ್ ವಂದಿಸಿದರು.