ಮಡಿಕೇರಿ, ಅ. 23: ಶಾಲೆಯ ವಿದ್ಯಾರ್ಥಿಯಾಗಿದ್ದ ಮಂಞಂಡ್ರ ಯು. ಕುಟ್ಟಪ್ಪ ಅವರು ಬಿ.ಎಸ್.ಎಫ್.ನಲ್ಲಿ 2002 ರಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಪಾಕಿಸ್ತಾನ ಯೋಧರು ಸಿಡಿಸಿದ ಶೆಲ್ ಧಾಳಿಗೆ ತುತ್ತಾಗಿ ವೀರ ಮರಣವನ್ನಪ್ಪಿದ್ದರು.ಕುಟ್ಟಪ್ಪ ಅವರು ಓದಿದ ಮರಗೋಡು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅವರ ಶಿಲಾ ಸ್ಮಾರಕವನ್ನು ನಿರ್ಮಿಸಿ ಅದಕ್ಕೆ ಹೂಗುಚ್ಚವಿಟ್ಟು ನಮಿಸಲಾಯಿತು. ಬೆಂಗಳೂರಿನಿಂದ ಆಗಮಿಸಿದ್ದ ಬಿ.ಎಸ್.ಎಫ್.ನ ಹವಲ್ದಾರ್‍ಗಳಾದ ಇಮ್ಯಾನುವೆಲ್ ಐಸಾಕ್ ಮತ್ತು ಜ್ಞಾನಮುಕ್ತಿ ಮಂಞಂಡ್ರ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಿವಪ್ಪ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ರುಪಣೆ ಮೋಹನ್, ಮುಖ್ಯ ಶಿಕ್ಷಕಿ ಕೆ.ಜಿ. ಚಂದ್ರಕಲಾ, ಐಮಂಡ ಜಲಜಾಕ್ಷಿ , ಶಾಲೆಯ ಶತಮಾನೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಎಂ.ಕೆ. ವೆಂಕಟೇಶ್, ವಿವೇಕಾನಂದ ಯುವಕ ಸಂಘದ ಅಧ್ಯಕ್ಷ ಬಡುವಂಡ್ರ ಲಕ್ಷ್ಮೀಪತಿ, ಎಂ.ಎಸ್.ಆರ್.ಸಿ. ಅಧ್ಯಕ್ಷ ಕೋಚನ ಲವೀನ್, ಗೌಡ ಸಮಾಜದ ಅಧ್ಯಕ್ಷ ದೇವಜನ ನಾಣಯ್ಯ, ಮಾಜಿ ಯೋಧರು, ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಪದ್ಮಾವತಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದರು. ರವಿಕುಮಾರ್ ಕುಟ್ಟಪ್ಪ ಅವರ ಬಾಲ್ಯದ ನೆನಪು ಮೆಲುಕು ಹಾಕಿದರು. ಕಟ್ಟೆಮನೆ ಸೋನಾಜಿತ್ ನಿರೂಪಿಸಿದರೆ, ಉಳುವಾರನ ರತನ್ ವಂದಿಸಿದರು.