ಕುಶಾಲನಗರ, ಅ. 23: ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿರುವ ‘ಕಾವೇರಿ ನದಿ ಸಂರಕ್ಷಿಸಿ’ ಮನವಿಯೊಂದಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಕಳುಹಿಸಲಾಗುವ 1 ಲಕ್ಷ ಅಂಚೆ ಕಾರ್ಡ್ ಚಳುವಳಿ ಹಿನ್ನೆಲೆ ಕೊಡಗು, ಮೈಸೂರು ಜಿಲ್ಲೆಗಳ ಕಾವೇರಿ ನದಿ ತಟಗಳ ವ್ಯಾಪ್ತಿಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರಿಂದ ಸಹಿ ಸಂಗ್ರಹಕ್ಕೆ ಕುಶಾಲನಗರದಲ್ಲಿ ಚಾಲನೆ ನೀಡಲಾಯಿತು.
ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಮತ್ತು ಸರಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಮಿತಿಯ ಪ್ರಮುಖರು ಕಾಲೇಜಿನ ಮುಖ್ಯಸ್ಥರ ಮೂಲಕ ಚಳುವಳಿಗೆ ಚಾಲನೆ ನೀಡಲಾಯಿತು. ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ, ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ. ವೆಂಕಟೇಶ್ ಬೆಮ್ಮತ್ತಿ ಅವರುಗಳು ಅಂಚೆ ಕಾರ್ಡ್ಗೆ ಸಹಿ ಹಾಕುವ ಮೂಲಕ ಬೆಂಬಲ ಸೂಚಿಸಿದರು.
ಕುಶಾಲನಗರ ವ್ಯಾಪ್ತಿಯ ಹಲವು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ 20 ಸಾವಿರ ಸೇರಿದಂತೆ ಎರಡು ಜಿಲ್ಲೆಗಳ ಅಂದಾಜು 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಅಂಚೆ ಕಾರ್ಡ್ಗಳಿಗೆ ಸಹಿ ಸಂಗ್ರಹಿಸುವ ಉದ್ದೇಶ ಹೊಂದಲಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಅಭಿಯಾನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.
ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಂದ ಅಕ್ಟೋಬರ್ 11 ರಂದು ಕುಶಾಲನಗರದಲ್ಲಿ ಪ್ರಾರಂಭಗೊಂಡ ಚಳುವಳಿಗೆ ಈಗಾಗಲೆ 20 ಸಾವಿರಕ್ಕೂ ಅಧಿಕ ಕಾರ್ಡ್ಗಳಿಗೆ ಸಹಿ ಸಂಗ್ರಹವಾಗಿದ್ದು, ಭಾಗಮಂಡಲ-ತಲಕಾವೇರಿ ಕ್ಷೇತ್ರದಲ್ಲಿ 10 ಸಾವಿರಕ್ಕೂ ಅಧಿಕ ಜನರಿಂದ ಬೆಂಬಲ ದೊರೆತಿದೆ ಎಂದು ಅವರು ತಿಳಿಸಿದ್ದಾರೆ. ಕೊಡಗು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಸಿ.ಹೆಚ್. ವಿಜಯಶಂಕರ್, ಮಾಜಿ ಸಂಸತ್ ಸದಸ್ಯೆ ರಮ್ಯ, ಚಲನಚಿತ್ರ ನಟ ಶಿವರಾಜ್ಕುಮಾರ್ ಮತ್ತಿತರ ಪ್ರಮುಖರು ಅಂಚೆ ಕಾರ್ಡ್ಗೆ ಸಹಿ ಹಾಕುವ ಮೂಲಕ ತಮ್ಮ ಬೆಂಬಲ ಘೋಷಿಸಿದ್ದಾರೆ.
ನವೆಂಬರ್ 16 ರ ತನಕ ಈ ಚಳುವಳಿ ನಡೆಯಲಿದ್ದು 1 ಲಕ್ಷ ಅಂಚೆ ಕಾರ್ಡ್ಗಳನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಕಳುಹಿಸಿಕೊಡಲಾಗುವದು.
ಇದರೊಂದಿಗೆ ಜಿಲ್ಲೆಯ 500 ಕ್ಕೂ ಅಧಿಕ ಸಂಘ-ಸಂಸ್ಥೆಗಳನ್ನೊಳಗೊಂಡಂತೆ ಮನವಿ ಪತ್ರವೊಂದನ್ನು ಮುಖ್ಯ ನ್ಯಾಯಾಧೀಶರಿಗೆ ಕಳುಹಿಸುವ ಮೂಲಕ ಅಂಚೆಯಲ್ಲಿ ಕಳುಹಿಸಿದ ಕಾರ್ಡ್ಗಳ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೆಂದು ಪರಿಗಣಿಸುವ ಮೂಲಕ ಜೀವನದಿ ಕಾವೇರಿಯ ಸಂರಕ್ಷಣೆಗೆ ಯೋಜನೆಗಳನ್ನು ರೂಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಆದೇಶಿಸುವಂತೆ ಕೋರಲಾಗುವದು ಎಂದು ಚಂದ್ರಮೋಹನ್ ತಿಳಿಸಿದ್ದಾರೆ.