ಬೆಂಗಳೂರು, ಅ. 23: ಟಿಪ್ಪು ಜಯಂತಿ ಆಚರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ನುಡಿ ನುಡಿದಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರ ರೊಂದಿಗೆ ಮತನಾಡಿದ ಮುಖ್ಯಮಂತ್ರಿಗಳು ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸ್ವಾತಂತ್ರ್ಯ ಯೋಧ. ಟಿಪ್ಪು ಜಯಂತಿ ಆಚರಿಸುವದು ದೇಶಪ್ರೇಮ. ಟಿಪ್ಪು ಜಯಂತಿ ಆಚರಣೆ ಮಾಡಿದರೆ ತಪ್ಪು ಹುಡುಕುವದು ಸಂಕುಚಿತ ಮನೋಭಾವದವರು ಮಾಡುವ ಕೆಲಸವಾಗಿದೆ. ಇದು ಜನರನ್ನು ದಾರಿ ತಪ್ಪಿಸುವ ಪ್ರಯತ್ನ. ಇದರಲ್ಲಿ ಹುಳಿ ಹಿಂಡುವ ಕೆಲಸವನ್ನು ಸಂಘ ಪರಿವಾರ ಮಾಡುತ್ತಿದೆ. ಸಮಾಜದಲ್ಲಿ ಸಾಮರಸ್ಯ ಇರಬಾರದು ಎಂದವರು ಸದಾ ಬಯಸುತ್ತಾರೆ ಎಂದು ದೂರಿದರು.
ಕಳೆದ ವರ್ಷ ಕೊಡಗಿನಲ್ಲಿ ಟಿಪ್ಪು ಜಯಂತಿ ವೇಳೆ ಅಹಿತಕರ ಘಟನೆಗಳು ಸಂಭವಿಸಿತ್ತು. ಈ ಬಾರಿ ಅಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯ ಮಂತ್ರಿ ಸಿದ್ಧರಾಮಯ್ಯ ಹೇಳಿದರು.
ವ್ಯಕ್ತಗೊಳ್ಳುತ್ತಿರುವ ವಿರೋಧ
ಟಿಪ್ಪು ಜಯಂತಿ ಆಚರಣೆಗೆ ಕೊಡಗು ಜಿಲ್ಲೆಯಲ್ಲಿ ತೀವ್ರ ವಿರೋಧ ವ್ಯಕ್ತಗೊಳ್ಳುತ್ತಿದೆ. ಟಿಪ್ಪು ದೇವಟ್ಪರಂಬ್ನಲ್ಲಿ ನಡೆಸಿದನೆನ್ನಲಾದ ಕೊಡವರು ಹಾಗೂ ಇತರ ಜನಾಂಗದವರ ನರಮೇಧ, ಅತ್ಯಾಚಾರ ಮತ್ತು ಮತಾಂತರಕ್ಕೆ ಒಳಗಾದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಸಂಘ - ಸಂಸ್ಥೆಗಳು ಹಾಗೂ ಹಿಂದೂಪರ ಸಂಘಟನೆಗಳಿಂದ ಟಿಪ್ಪು ಜಯಂತಿ ಆಚರಣೆಗೆ ಕಳೆದ ಬಾರಿಯೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಸರ್ಕಾರ ಜಿಲ್ಲೆಯ ಜನತೆಯ ಭಾವನೆಗಳಿಗೆ ಬೆಲೆ ಕೊಡದೆ ಟಿಪ್ಪು ಜಯಂತಿಯನ್ನು ಆಚರಿಸಲು ಮುಂದಾಗಿ ಟಿಪ್ಪು ಜಯಂತಿಯ ದಿನದಂದು ಹಿಂದೂ ಸಂಘಟನೆಯ ಮುಖಂಡ ದೇವಪ್ಪಂಡ ಕುಟ್ಟಪ್ಪ ಹಾಗೂ ನೆಲ್ಲಿಹುದಿಕೇರಿಯ ಶಾಹುಲ್ ಹಮೀದ್ ಎಂಬವರ ಸಾವು ಸಂಭವಿಸಿತ್ತು. ಟಿಪ್ಪು ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ ಮುಂದಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೋಮು ಸಾಮರಸ್ಯಕ್ಕೆ ಧಕ್ಕೆಯುಂಟಾಗಿ ಪರಸ್ಪರ ಸಂಶಯದಿಂದಲೇ ನೋಡುವಂತಾಗಿತ್ತು. ಈ ಅಹಿತಕರ ಘಟನೆಯಿಂದ ಎಚ್ಚೆತ್ತುಕೊಳ್ಳದ ಸರ್ಕಾರ ಈ ಬಾರಿಯೂ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದೆ. ಈ ಬಾರಿಯೂ ಜಿಲ್ಲೆಯ ಅನೇಕ ಸಂಘ - ಸಂಸ್ಥೆಗಳು, ಕೊಡವ ಸಮಾಜಗಳು ಹಾಗೂ ಹಿಂದೂ ಸಂಘಟನೆಗಳು ಟಿಪ್ಪು ಜಯಂತಿ ಆಚರಣೆಯನ್ನು ಈಗಾಗಲೇ ತೀವ್ರ ವಿರೋಧಿಸಿವೆ. ಆದರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಟಿಪ್ಪು ಜಯಂತಿ ಆಚರಣೆ ಮಾಡುವದಾಗಿ ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.