ಶ್ರೀಮಂಗಲ, ಜ. 12 : ಶ್ರೀಮಂಗಲ ಪಟ್ಟಣ ವ್ಯಾಪ್ತಿಗೆ ಶ್ರೀಮಂಗಲ ವಿದ್ಯುತ್ ಉಪಕೇಂದ್ರದಿಂದ ಪ್ರತ್ಯೇಕ ಫೀಡರ್ ನಿರ್ಮಿಸಿರುವದರಿಂದ ಬಹುವರ್ಷದಿಂದ ಪಟ್ಟಣದ ವಿದ್ಯುತ್ ಅಡಚಣೆಗೆ ಮುಕ್ತಿ ದೊರೆತಿದೆ. ಇನ್ನು ಮುಂದೆ ನಿರಂತರವಾಗಿ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಇರಲಿದೆ. ಇದರಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಶ್ರೀಮಂಗಲ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಕೆ. ಮುತ್ತಪ್ಪ ಹೇಳಿದರು.

ಶ್ರೀಮಂಗಲ 33 ಕೆ.ವಿ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಪಟ್ಟಣಕ್ಕೆ ವಿದ್ಯುತ್ ಕಲ್ಪಿಸುವ ನೂತನ ಫೀಡರ್ ಅಳವಡಿಸಿರುವದನ್ನು ಉದ್ಘಾಟಿಸಿ ಅವರು ಮಾತನಾಡಿದರು. ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಸ್ಥಳೀಯ ವರ್ತಕರು ಈ ಫೀಡರ್ ಅಳವಡಿಸಲು ಸಹಕಾರ ನೀಡಿದ್ದಾರೆ. ಇದರಿಂದ ಶ್ರೀಮಂಗಲ ಪಟ್ಟಣದಲ್ಲಿ ವಿದ್ಯುತ್ ಅಡಚಣೆಯಿಂದ ಜನರಿಗೆ ತೊಂದರೆ ತಪ್ಪಿದಂತಾಗಿದೆ. ಇಲಾಖೆಯ ಸಿಬ್ಬಂದಿಗಳು ವಾಸಿಸುವ ವಸತಿ ಗೃಹ ಶಿಥಿಲಾವಸ್ಥೆಯಲ್ಲಿದ್ದು, ಇದರ ದುರಸ್ತಿಗೆ ಇಲಾಖೆಯೊಂದಿಗೆ ಸಹಕಾರ ನೀಡುವ ಭರವಸೆ ನೀಡಿದರು.

ಶ್ರೀಮಂಗಲ ನಾಗರೀಕ ಹೋರಾಟ ಸಮಿತಿಯ ಅಧ್ಯಕ್ಷ ಮಚ್ಚಮಾಡ ಟಿ. ಕಾರ್ಯಪ್ಪ ಮಾತನಾಡಿ, ಹಲವು ದಶಕದಿಂದ ಶ್ರೀಮಂಗಲ ಪಟ್ಟಣಕ್ಕೆ ಪ್ರತ್ಯೇಕ ಫೀಡರ್‍ಗಾಗಿ ಜನರ ಬೇಡಿಕೆ ಈಡೇರಿದೆ. ಈ ಫೀಡರ್ ಅಳವಡಿಸಲು

(ಮೊದಲ ಪುಟದಿಂದ) ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ, ಚೆಸ್ಕ್‍ನ ಮಡಿಕೇರಿ ಕಾರ್ಯಪಾಲಕ ಇಂಜಿನಿಯರ್ ಸೋಮಶೇಖರ್, ಗೋಣಿಕೊಪ್ಪ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಂಕಯ್ಯ, ಶ್ರೀಮಂಗಲ ಶಾಖಾ ಇಂಜಿನಿಯರ್ ಸೋಮಶೇಖರ್ ಹಾಗೂ ಗುತ್ತಿಗೆದಾರ ಶಶಿ ಅವರ ಸಹಕಾರ ಹಾಗೂ ರಾಜ್ಯ ಇಂಧನ ಸಚಿವರು ನೂತನ ಫೀಡರ್ ಬೇಡಿಕೆಯನ್ನು ತಮ್ಮ ಮನವಿ ಪತ್ರ ಸಲ್ಲಿಸಿದ ಒಂದು ವಾರದ ಒಳಗೆ ಮಂಜೂರು ಮಾಡಿಕೊಟ್ಟರು ಎಂದು ಸ್ಮರಿಸಿದರು.

ಶ್ರೀಮಂಗಲ ಗ್ರಾ.ಪಂ. ಅಧ್ಯಕ್ಷೆ ಅಜ್ಜಮಾಡ ಮುತ್ತಮ್ಮ ಮಾತನಾಡಿ, ಅಡಚಣೆಯಿಂದ ಪಟ್ಟಣದಲ್ಲಿ ವಿದ್ಯುತ್ ಕಡಿತಕ್ಕೆ ಈ ಫೀಡರ್ ಅಳವಡಿಕೆಯಿಂದ ಪರಿಹಾರ ದೊರೆತಿದೆ. ಇದರಿಂದ ಜನರಿಗೆ ಹೆಚ್ಚಿನ ಪ್ರಯೋಜನವಾಗಿದೆ ಎಂದು ಹೇಳಿದರು.

ವಿದ್ಯುತ್ ಉಪಕೇಂದ್ರದ ಇಂಜಿನಿಯರ್ ಸೋಮಶೇಖರ್ ಮಾತನಾಡಿ, 1969-70ರಲ್ಲಿ ಶ್ರೀಮಂಗಲ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಯಿತು. ಆ ಸಂದರ್ಭ 1200 ಗ್ರಾಹಕರಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಆದರೆ ಈಗ 13 ಸಾವಿರ ಗ್ರಾಹಕರು ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಕುಟ್ಟ, ಕುಟ್ಟ ಎಕ್ಸ್‍ಪ್ರೆಸ್ ಮಾರ್ಗ, ಬಿರುನಾಣಿ ಮತ್ತು ಕಾನೂರು ಮಾರ್ಗದ ಫೀಡರ್ ಜೊತೆಗೆ ಇದೀಗ ಪಟ್ಟಣಕ್ಕೆ ಸೀಮಿತವಾಗಿ ನೂತನ ಫೀಡರ್ ಚಾಲನೆಯಾಗಿದೆ. ಈ ಮೊದಲು ಶ್ರೀಮಂಗಲ ಪಟ್ಟಣಕ್ಕೆ ಬಿರುನಾಣಿ ಹಾಗೂ ಕಾನೂರು ಫೀಡರ್ ಅನ್ನು ಸಂಪರ್ಕ ಮಾಡಲಾಗಿತ್ತು. ಇದರಿಂದ ಈ ಮಾರ್ಗದಲ್ಲಿ ಎಲ್ಲೇ ಅಡಚಣೆಯಾದರೂ ಪಟ್ಟಣದಲ್ಲಿ ವಿದ್ಯುತ್ ಕಡಿತವಾಗುತ್ತಿತ್ತು. ಇದರಿಂದ ಪಟ್ಟಣದ ವರ್ತಕರು ಹಾಗೂ ಕಚೇರಿಗಳಿಗೆ ತೀವ್ರ ತೊಂದರೆಯಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆ ಇರುವದಿಲ್ಲ. ಈ ಕೇಂದ್ರವನ್ನು 33 ಕೆ.ವಿಯಿಂದ 66 ಕೆ.ವಿ.ಗೆ ಮೇಲ್ದರ್ಜೆಗೇರಿಸಲು ಸರ್ವೆ ಕಾರ್ಯ ಮಾಡಲು ಆದೇಶ ಬಂದಿದೆ. ಟ್ರಾನ್ಸ್‍ಪಾರ್ಮರ್‍ಗಳನ್ನು ಸಹ 12.5 ಮೆಗವ್ಯಾಟ್ ಸಾಮಥ್ರ್ಯಕ್ಕೆ ಏರಿಸಬೇಕಾಗಿದೆ. ಜನವರಿಯಿಂದ ರೈತರು ಹಾಗೂ ಬೆಳೆಗಾರರು ತೋಟಗಳಿಗೆ ಪಂಪ್‍ಸೆಟ್ ಬಳಸುವದರಿಂದ ಕಾರ್ಯ ಒತ್ತಡ ಹೆಚ್ಚಾಗಿರುತ್ತದೆ. ಆದ್ದರಿಂದ ಟ್ರಾನ್ಸ್‍ಪಾರ್ಮರ್‍ಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭ ನೂತನ ಫೀಡರ್‍ಗೆ ಪೂಜೆ ಸಲ್ಲಿಸಲಾಯಿತು. ಇಲಾಖೆಯ ಸಿಬ್ಬಂದಿಗಳು, ಪಟ್ಟಣದ ವರ್ತಕರು ಪಾಲ್ಗೊಂಡಿದ್ದರು.