ಮಡಿಕೇರಿ, ಜ. 12: ಕೊಡಗು ಜಿಲ್ಲೆಯ ಮೂರು ಕೃಷಿ ಉತ್ಪನ್ನ ಮಾರುಕಟ್ಟೆ- (ಎಪಿಎಂಸಿ)ಗಳಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಶೇ. 38.33ರಷ್ಟು ಮತ ಚಲಾವಣೆಯಾಗಿವೆ. ಒಟ್ಟು 75273 ಮತದಾರರಲ್ಲಿ 28854 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ.ರಾಜಕೀಯ ಚಿಹ್ನೆಯಡಿ ನಡೆಯುವ ಚುನಾವಣೆ ಇದಲ್ಲದಿದ್ದರೂ ರಾಜಕೀಯ ಹಿನ್ನೆಲೆಯೊಂದಿಗೆ ಚುನಾವಣೆಯ ಬಿರುಸು ಕಂಡು ಬಂದಿತು. ಜಿಲ್ಲೆಯಲ್ಲಿ ಮಡಿಕೇರಿ, ಕುಶಾಲನಗರ ಹಾಗೂ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗೆ ಚುನಾವಣೆ ನಡೆಯಿತು.

ಮಡಿಕೇರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶೇ. 29ರಷ್ಟು, ಕುಶಾಲನಗರ ಶೇ. 43.91 ಹಾಗೂ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಗೆ ಶೇ. 41ರಷ್ಟು ಮತದಾನವಾಗಿದೆ 22489 ಮತದಾರರಲ್ಲಿ 6521 ಮಂದಿ ಮಾತ್ರ ಮತ ಚಲಾವಣೆ ಮಾಡಿದ್ದಾರೆ.

ಮಡಿಕೇರಿಯ 11 ಕೃಷಿಕರ ಕ್ಷೇತ್ರ, ಒಂದು ವರ್ತಕರ ಕ್ಷೇತ್ರ ಹಾಗೂ ಸಹಕಾರ ಮಾರುಕಟ್ಟೆ ಸಂಘದ ಒಂದು ಕ್ಷೇತ್ರ ಸೇರಿದಂತೆ ಒಟ್ಟು 13 ಕ್ಷೇತ್ರಕ್ಕೆ ಚುನಾವಣೆ ನಡೆಯಬೇಕಿತ್ತು. ಆದರೆ ಮರಗೋಡು ಕ್ಷೇತ್ರದಿಂದ ಕಾಂಗೀರ ಸತೀಶ್, ನಾಪೋಕ್ಲುವಿನಿಂದ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ನರಿಯಂದಡದಿಂದ ಚೇನಂಡ ಈ. ಗಿರೀಶ್ ಪೂಣಚ್ಚ ಹಾಗೂ ಸಹಕಾರ ಮಾರುಕಟ್ಟೆ ವ್ಯವಹಾರ ಸಂಘದ ಕ್ಷೇತ್ರದಿಂದ ಎಂ.ಕೆ. ಕುಟ್ಟಪ್ಪ ಅವಿರೋಧವಾಗಿ ಆಯ್ಕೆಗೊಂಡಿದ್ದು, ಈ ಕ್ಷೇತ್ರದಲ್ಲಿ ಚುನಾವಣೆ ಪ್ರಕ್ರಿಯೆ ನಡೆದಿಲ್ಲ.

ಕುಶಾಲನಗರ ಹಾಗೂ ಗೋಣಿಕೊಪ್ಪಲಿನಲ್ಲಿ ತಲಾ 11 ಕೃಷಿಕರ ಕ್ಷೇತ್ರ ಹಾಗೂ ತಲಾ ಒಂದೊಂದು ವರ್ತಕರ ಕ್ಷೇತ್ರ ಸೇರಿ ಒಟ್ಟು 24 ಕ್ಷೇತ್ರಗಳಿವೆ. ಈ ಪೈಕಿ ಗೋಣಿಕೊಪ್ಪಲು ಎಪಿಎಂಸಿಗೆ ಪೊನ್ನಂಪೇಟೆ ಕ್ಷೇತ್ರದಿಂದ ಚೀಯಕಪೂವಂಡ ಜಿ. ಸುಬ್ರಮಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.

ನಾಪೆÇೀಕ್ಲು ಮತ್ತು ನರಿಯಂದಡ ಕ್ಷೇತ್ರದಿಂದ ಚೇನಂಡ ಗಿರೀಶ್ ಅವಿರೋಧವಾಗಿ ಆಯ್ಕೆಯಾಗಿರುವ ಹಿನೆÀ್ನಲೆಯಲ್ಲಿ ಕಕ್ಕಬ್ಬೆ ಕ್ಷೇತ್ರದಲ್ಲಿ ಮಾತ್ರ ಚುನಾವಣೆ ನಡೆಯಿತು. ಈ ಕ್ಷೇತ್ರದಿಂದ ಮಹಿಳಾ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕರ್ತಂಡ ಶೈಲಾ ಕುಟ್ಟಪ್ಪ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಮಂಡೀರಾ ಹೇಮಲತಾ ಸ್ಪರ್ಧಿಸಿದ್ದಾರೆ.

ನಾಪೆÇೀಕ್ಲು ಬಲ್ಲಮಾವಟಿ ಗ್ರಾಮ ಪಂಚಾಯಿತಿ ಕಚೇರಿ, ನೆಲಜಿ ಅಂಬಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಕಕ್ಕಬ್ಬೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ಶಾತಿಯುತವಾಗಿ ನಡೆಯಿತು.

ಸೋಮವಾರಪೇಟೆಯಲ್ಲಿ ಶೇ 43.9 ಮತದಾನ

ರಾಜಕೀಯ ಪಕ್ಷಗಳ ಪ್ರತಿಷ್ಠೆಯ ಕಣವಾಗಿ ಪರಿವರ್ತಿತವಾಗಿರುವ ತಾಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಇಂದು ನಡೆದ ಚುನಾವಣೆಯಲ್ಲಿ ಶೇ. 43.9ರಷ್ಟು ಮತದಾನವಾಗಿದ್ದು, ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಗ್ರಾಮೀಣ ಭಾಗಗಳಲ್ಲಿ ಕಾಫಿ ಹಾಗೂ ಭತ್ತ ಕೊಯ್ಲಿನ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಕಾರಣಕ್ಕಾಗಿ ಕೆಲವರು ಮತಗಟ್ಟೆಗಳ ಬಳಿ ಸುಳಿಯದಿದ್ದರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸದಸ್ಯರಾಗಿರುವ ಹಲವರು ಮೈಸೂರು-ಬೆಂಗಳೂರು ಸೇರಿದಂತೆ ಇತರ ನಗರ ಪ್ರದೇಶಗಳಲ್ಲಿ ನೆಲೆಸಿರುವ ಹಿನ್ನೆಲೆ ಮತದಾನಕ್ಕೆ ಮನಸ್ಸು ಮಾಡಲಿಲ್ಲ.

ತಾಲೂಕಿನ 27 ಮತಗಟ್ಟೆಯಲ್ಲಿ ಬೆಳಿಗ್ಗೆ 8ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಕೆಲವೇ ಕೆಲವು ಮತಗಟ್ಟೆಗಳಲ್ಲಿ ಮಾತ್ರ ಕೆಲ ಗಂಟೆಗಳವರೆಗೆ ಮತದಾರರ ಸರತಿ ಸಾಲು ಕಂಡುಬಂದರೆ ಉಳಿದಂತೆ ಮತದಾನ ಪ್ರಕ್ರಿಯೆ ನಿಧಾನಗತಿಯಲ್ಲಿ ನಡೆಯಿತು.

19,506 ಪುರುಷರು ಮತ್ತು 4267 ಮಹಿಳಾ ಮತದಾರರು ಸೇರಿದಂತೆ ಒಟ್ಟು 23,773 ಮಂದಿ ಮತದಾರರಿದ್ದು, 8481 ಮಂದಿ ಪುರುಷರು ಹಾಗೂ 1959 ಮಂದಿ ಮಹಿಳೆಯರು ಮತದಾನದಲ್ಲಿ ಭಾಗವಹಿದ್ದರು. ಒಟ್ಟು 33 ಮಂದಿ ಕಣದಲ್ಲಿದ್ದು, ಸಂಜೆ ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಡೀಮಸ್ಟರಿಂಗ್ ಕಾರ್ಯ ನಡೆಯಿತು.

27 ಪಿಆರ್‍ಒ, 27 ಮಂದಿ ಎಪಿಆರ್‍ಒ, 54 ಮಂದಿ ಮತಗಟ್ಟೆ ಅಧಿಕಾರಿಗಳು ಕಾರ್ಯನಿರ್ವಹಿಸಿದರು. ಸರ್ಕಲ್ ಇನ್ಸ್‍ಪೆಕ್ಟರ್ ಪರಶಿವಮೂರ್ತಿ, ಠಾಣಾಧಿಕಾರಿ ಶಿವಣ್ಣ ಉಸ್ತುವಾರಿಯಲ್ಲಿ ಪ್ರತಿ

(ಮೊದಲ ಪುಟದಿಂದ) ಮತಗಟ್ಟೆಯಲ್ಲಿ ಇಬ್ಬರಂತೆ 54 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗಿತ್ತು.

ಕೊಡ್ಲಿಪೇಟೆ (ಸಾಮಾನ್ಯ) ಕ್ಷೇತ್ರದಲ್ಲಿ ಶೇ. 55.24 ರಷ್ಟು ಮತದಾನವಾಗಿದ್ದು, ಎಚ್.ಎಂ. ಶರತ್‍ಚಂದ್ರ, ಕೆ.ಎಂ. ಗಣೇಶ್, ಎಸ್.ಡಿ. ತಮ್ಮಯ್ಯ ಕಣದಲ್ಲಿದ್ದಾರೆ. ಶನಿವಾರಸಂತೆ (ಮಹಿಳಾ ಮೀಸಲು) ಕ್ಷೇತ್ರದಲ್ಲಿ ಶೇ. 42.07 ಮತದಾನವಾಗಿದ್ದು, ಜಿ.ಎಂ. ಶಿವಮಣಿ, ಬಿ.ಎಂ. ಸರಳಾಕ್ಷಿ, ಗಾಯತ್ರಿ ತಮ್ಮಯ್ಯ ಅಭ್ಯರ್ಥಿಗಳಾಗಿದ್ದಾರೆ. ಗೌಡಳ್ಳಿ (ಬಿಸಿಎಂ ಎ) ಕ್ಷೇತ್ರದಲ್ಲಿ ಶೇ. 31.84 ರಷ್ಟು ಮತದಾನವಾಗಿದ್ದು, ಎಂ.ಎಂ. ಶಿವನ್, ಟಿ.ಪಿ. ವಿಜಯ, ಎ.ಜಿ. ವಿಜಯ ಕಣದಲ್ಲಿದ್ದಾರೆ. ಬೇಳೂರು (ಸಾಮಾನ್ಯ) ಕ್ಷೇತ್ರದಲ್ಲಿ ಶೇ. 60.90 ಮತದಾನವಾಗಿದ್ದು, ಡಿ.ಎಸ್. ಪೊನ್ನಪ್ಪ, ಮೂಡಗದ್ದೆ ದಾಮೋದರ್ ಸ್ಪರ್ಧೆಯಲ್ಲಿದ್ದಾರೆ.

ಕಿರಗಂದೂರು (ಮಹಿಳೆ) ಕ್ಷೇತ್ರದಲ್ಲಿ ಶೇ.39.98ರಷ್ಟು ಮತದಾನವಾಗಿದ್ದು, ಕಮಲಾಕ್ಷಿ, ಸುಮಿತ್ರ ಕಣದಲ್ಲಿದ್ದಾರೆ. ಹಾನಗಲ್ಲು (ಬಿಸಿಎಂ.(ಬಿ)) ಕ್ಷೇತ್ರದಲ್ಲಿ ಶೇ. 67.48 ರಷ್ಟು ಮತದಾನವಾಗಿದ್ದು, ಸಿ.ಎಸ್. ನಾಗರಾಜು, ಡಿ.ಡಿ. ಪೊನ್ನಪ್ಪ, ಎಲ್.ಜಿ. ಮದನ್ ಅಭ್ಯರ್ಥಿಗಳಾಗಿದ್ದಾರೆ. ಶಾಂತಳ್ಳಿ (ಸಾಮಾನ್ಯ) ಕ್ಷೇತ್ರದಲ್ಲಿ ಶೇ.54.89ರಷ್ಟು ಮತದಾನವಾಗಿದ್ದು, ಡಿ.ಎಸ್. ಲಿಂಗರಾಜು, ಕೆ.ಕೆ. ಗೋಪಾಲ್, ಕೆ.ಕೆ. ಮುತ್ತಣ್ಣ ಕಣದಲ್ಲಿದ್ದಾರೆ.

ಹರದೂರು (ಸಾಮಾನ್ಯ) ಕ್ಷೇತ್ರದಲ್ಲಿ ಶೇ.55.37 ಮತದಾನವಾಗಿದ್ದು, ಕ್ಲೈವ್ ಪೊನ್ನಪ್ಪ, ಬಿ.ಎ. ಮೊಣ್ಣಪ್ಪ ಸುಬ್ರಮಣಿ ಸ್ಪರ್ಧಾಳುಗಳಾಗಿದ್ದಾರೆ. ಚೇರಳ ಶ್ರೀಮಂಗಲ (ಸಾಮಾನ್ಯ) ಕ್ಷೇತ್ರದಲ್ಲಿ 42.69 ರಷ್ಟು ಮತದಾನವಾಗಿದ್ದು, ಸಿ.ಪಿ. ವಿಜಯ, ಹಳಗದ್ದೆ ಮಾದಪ್ಪ, ಕೆ.ಟಿ. ಹರೀಶ್ ಕಣದಲ್ಲಿದ್ದಾರೆ. ಹೆಬ್ಬಾಲೆ (ಅನುಸೂಚಿತ ಪಂಗಡ) ಕ್ಷೇತ್ರದಲ್ಲಿ ಶೇ. 31.36 ರಷ್ಟು ಮತದಾನವಾಗಿದ್ದು, ಸಿ.ಕೆ. ಉದಯಕುಮಾರ್, ಚಿಕ್ಕಯ್ಯ, ಕೆ.ಬಿ. ರಾಮಚಂದ್ರ ಸ್ಪರ್ಧೆಯಲ್ಲಿದ್ದಾರೆ.

ವರ್ತಕರ ಕ್ಷೇತ್ರದಲ್ಲಿ ಶೇ. 93.62 ರಷ್ಟು ಮತದಾನವಾಗಿದ್ದು, ಕೆ.ಸಿ. ಭೀಮಯ್ಯ, ಎಚ್.ಎಸ್. ರಘು, ಎಂ.ಬಿ. ಪ್ರದೀಪ್ ಅವರುಗಳು ಕಣದಲ್ಲಿದ್ದಾರೆ. ತಾ. 14ರಂದು ಜೂನಿಯರ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿಗಳಾದ ತಹಶೀಲ್ದಾರ್ ಜಿ.ಎಸ್. ಕೃಷ್ಣ ತಿಳಿಸಿದ್ದಾರೆ.

ಕೂಡಿಗೆ: ಕುಶಾಲನಗರ ಹೋಬಳಿ ವ್ಯಾಪ್ತಿಯ ಕುಶಾಲನಗರ ಕ್ಷೇತ್ರ, ಹೆಬ್ಬಾಲೆ ಕ್ಷೇತ್ರ ವ್ಯಾಪ್ತಿಗಳಲ್ಲಿ ಶಾಂತಿಯುತವಾಗಿ ರೈತರುಗಳು ಆಯಾ ಗ್ರಾಮ ಪಂಚಾಯಿತಿಗಳಿಗೆ ತೆರಳಿ ತಮ್ಮ ಮತ ಚಲಾಯಿಸಿದರು.

ಈ ವ್ಯಾಪ್ತಿಗೊಳಪಡುವ ಮತಗಟ್ಟೆಗಳಾದ ಕೂಡುಮಂಗಳೂರು, ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿಗಳಲ್ಲಿ ಮತ ಚಲಾವಣೆ ನಡೆಸಲಾಯಿತು.

ಮತ ಚಲಾವಣೆ ಸಂದರ್ಭ ವಯೋವೃದ್ಧ ರೈತ ಮಹಿಳೆಯರು ಪುರುಷರೊಳಗೊಂಡಂತೆ ಉತ್ಸಾಹದಿಂದ ಮತ ಚಲಾಯಿಸಿದರು.

ಕೂಡಿಗೆಯೊಂದರ ಮತಗಟ್ಟೆಯಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪಕ್ಷದ ನಾಯಕರುಗಳಾದ ಎಸ್.ಎನ್.ರಾಜಾರಾವ್, ಟಿ.ಪಿ. ಹಮೀದ್, ಟಿ.ಕೆ. ವಿಶ್ವನಾಥ್, ಕೆ.ಕೆ. ಹೇಮಂತ್ ಕುಮಾರ್ ಮತಯಾಚಿಸಿದರು.

ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರು ಈ ಹೋಬಳಿ ವ್ಯಾಪ್ತಿಯ ಶಿರಂಗಾಲ, ಹೆಬ್ಬಾಲೆ, ತೊರೆನೂರು, ಕೂಡಿಗೆ, ಕೂಡುಮಂಗಳೂರು ಗ್ರಾ.ಪಂ ಮತಗಟ್ಟೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಾಲಿನ ಎಪಿಎಂಸಿ ಆಡಳಿತ ಚುಕ್ಕಾಣಿಯನ್ನು ಭಾರತೀಯ ಜನತಾ ಪಕ್ಷ ಅಧಿಕಾರವನ್ನು ಹಿಡಿಯಲಿದೆ ಎಂದರು.

ಈ ಸಂದರ್ಭ ಕೃಷಿ ಸ್ಥಾಯಿ ಸಮಿತಿಯ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್, ಬಿಜೆಪಿ ಎಸ್.ಟಿ. ಮೋರ್ಚಾದ ಅಧ್ಯಕ್ಷ ಎಸ್.ಎನ್. ರಾಜಾರಾವ್, ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ, ಉಪಾಧ್ಯಕ್ಷ ಗಿರೀಶ್ ಸೇರಿದಂತೆ ಗ್ರಾ.ಪಂ.ನ ಬಿಜೆಪಿ ಬೆಂಬಲಿತ ಸದಸ್ಯರುಗಳು, ಕುಶಾಲನಗರ ಎಪಿಸಿಎಂಎಸ್ ಅಧ್ಯಕ್ಷ ಚಂದ್ರಪ್ಪ, ತಾಲೂಕು ಪಂಚಾಯಿತಿ ಸದಸ್ಯ ಜಯಣ್ಣ, ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.

ಕೊಡಗಿನ ಗಡಿಭಾಗ ಶಿರಂಗಾಲವೊಂದರ ಮತಗಟ್ಟೆ ಕೆಂದ್ರದಲ್ಲಿ ನಲ್ಲೂರು ಗ್ರಾಮದ ಮಾಜಿ ಸೈನಿಕರೊಬ್ಬರು ನಡೆಯಲಾಗದೆ ಮತಗಟ್ಟೆಯ ಮುಂಬಾಗಿಲವರೆಗೆ ತೆರಳಿದಾಗ ಮತಗಟ್ಟೆಯ ಅಧಿಕಾರಿ ಅವರ ಬಳಿ ಬಂದು ಅವರಿದ್ದ ಜಾಗದಲ್ಲೆ ಕೈ ಬೆರಳಿಗೆ ಶಾಹಿ ಹಾಕಿ ಮತ ಪತ್ರವನ್ನು ಕೈಗೆ ನೀಡಿ ಗೌಪ್ಯವಾಗಿ ಮತ ಚಲಾಯಿಸಲು ಅಧಿಕಾರಿಗಳು ಸಹಕರಿಸಿದರು.

ಕುಶಾಲನಗರ: ಆರ್‍ಎಂಸಿ ಚುನಾವಣೆ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಕಚೇರಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಚೇರಿ ಕೇಂದ್ರಗಳಲ್ಲಿ ಮತದಾನ ನಡೆಯಿತು. ಕುಶಾಲನಗರ ಕ್ಷೇತ್ರದ ಅಭ್ಯರ್ಥಿಗಳಾದ ಹೆಚ್.ಡಿ. ಚಂದ್ರು, ಕೆ.ಟಿ. ಈರಯ್ಯ, ಎಂ.ಡಿ. ರಮೇಶ್ ಅವರುಗಳ ಆಯ್ಕೆಗೆ ಮತದಾನ ಬಿರುಸಿನಿಂದ ನಡೆಯಿತು.

ಮುಳ್ಳುಸೋಗೆ, ಗುಮ್ಮನಕೊಲ್ಲಿ, ಬೈಚನಹಳ್ಳಿ, ಮಾದಾಪಟ್ಟಣ, ಗೊಂದಿಬಸವನಹಳ್ಳಿ ವ್ಯಾಪ್ತಿಯ ರೈತರು ಮತದಾನದಲ್ಲಿ ಪಾಲ್ಗೊಂಡರು.

ಗೋಣಿಕೊಪ್ಪಲು: ಅಲ್ಲಲ್ಲಿ ನೀರಸ ಮತಚಲಾವಣೆ

ದಕ್ಷಿಣ ಕೊಡಗಿನಾದ್ಯಂತ ಎಪಿಎಂಸಿ ಚುನಾವಣಾ ಸಂಬಂಧ ಹೆಚ್ಚಿನ ಎಪಿಎಂಸಿ ಮತದಾರರು ಅಲ್ಲಲ್ಲಿ ಮತಚಲಾವಣೆಗೆ ಗೈರು ಹಾಜರಾಗುವ ಮೂಲಕ ಹೆಚ್ಚಿನ ಮತಗಟ್ಟೆಗಳಲ್ಲಿ ಮತದಾರರ ಜಂಗುಳಿ ಕಂಡುಬರಲಿಲ್ಲ. ಕಳೆದ ಹಲವು ವರ್ಷಗಳಿಂದ ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತವನ್ನು ಬಿಜೆಪಿ ನಡೆಸುತ್ತಾ ಬಂದಿದ್ದು, ಕಳೆದ ಬಾರಿ ಚುನಾವಣೆಯಲ್ಲಿ ಹುದಿಕೇರಿಯ ಚೆಕ್ಕೇರ ರತೀಶ್( ಕಾಂಗ್ರೆಸ್ ಬೆಂಬಲಿತ) ಹೊರತು ಪಡಿಸಿದರೆ ಉಳಿದ 11 ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು.

ಆದರೆ, ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪೈಪೆÇೀಟಿ ನೀಡಿದ್ದು ಒಂದೆರಡು ಸ್ಥಾನ ಹೆಚ್ಚಿಸಿಕೊಳ್ಳುವ ಆಶಾವಾದವನ್ನು ಕಾಂಗ್ರೆಸ್ ಪ್ರಮುಖರು ವ್ಯಕ್ತಪಡಿಸಿದ್ದರೆ, ಬಿಜೆಪಿ ಪ್ರಮುಖರು ಅರಮೇರಿ, ಚೆಂಬೆಬೆಳ್ಳೂರು, ಅಮ್ಮತ್ತಿ, ಪಾಲಿಬೆಟ್ಟ, ಬಿಟ್ಟಂಗಾಲ, ಟಿ.ಶೆಟ್ಟಿಗೇರಿ ಹಾಗೂ ಗೋಣಿಕೊಪ್ಪಲು ಕಮಿಷನ್ ಏಜೆಂಟರುಗಳ ಮತ್ತು ವ್ಯಾಪಾರಿಗಳ ಕ್ಷೇತ್ರದಲ್ಲಿ ನಿಚ್ಚಳ ಬಹುಮತಗಳಿಸುವ ಆಶಾವಾದ ವ್ಯಕ್ತಪಡಿಸಿದ್ದಾರೆ.

ಗೋಣಿಕೊಪ್ಪಲು ಕಮಿಷನ್ ಏಜೆಂಟರುಗಳ ಮತ್ತು ವ್ಯಾಪಾರಿಗಳ ಕ್ಷೇತ್ರದ ಇಲ್ಲಿನ ಹಳೆಯ ಗ್ರಾ.ಪಂ.ಕಟ್ಟಡದ 46 ನೇ ಮತಗಟ್ಟೆ ಸಂಖ್ಯೆಯಲ್ಲಿ ನಡೆದ ಮತದಾನದಲ್ಲಿ ಶೇ.86 ಮತಚಲಾವಣೆಯಾದ ವರದಿಯಾಗಿದೆ.

ವರ್ತಕರ ಕ್ಷೇತ್ರದ ಒಟ್ಟು 170 ಮತದಾರರಲ್ಲಿ 146 ಮಂದಿ ಮತಚಲಾಯಿಸಿದ್ದು ಶೇ.85.88 ಮತದಾನವಾಗಿದೆ. ಇಲ್ಲಿ 9 ಮಹಿಳಾ ಮತದಾರರೂ ಮತ ಚಲಾಯಿಸಿದ್ದಾರೆ.

ಮಾಯಮುಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ 29ರಲ್ಲಿ (ಬಾಳೆಲೆ ಕ್ಷೇತ್ರ) ಬೆಳಿಗ್ಗೆ 9 ಗಂಟೆಗೆ ಕೇವಲ 29 ಮಂದಿ ಮತಚಲಾವಣೆ ಮಾಡಿದ್ದು ಕಂಡು ಬಂತು. ಆದರೆ ಸಂಜೆ ವೇಳೆಗೆ 363 ಮತದಾರರಲ್ಲಿ 225 ಮಂದಿ ಮತಚಲಾವಣೆ ಮಾಡುವ ಮೂಲಕ ಶೇ. 61.98 ಮತದಾನ ದಾಖಲಾಗಿದೆ. ಇಲ್ಲಿಗೆ ಭೇಟಿ ನೀಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್‍ಪೂವಯ್ಯ ತಮ್ಮ ಏಕೈಕ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಎಂ.ಜಿ. ವಿನೀಶ್ ಅವರೊಂದಿಗೆ ಕಾಣಿಸಿಕೊಂಡರು. ಬಿಜೆಪಿಯ ಕಾಳಪಂಡ ಸುಧೀರ್, ಕಾಂಗ್ರೆಸ್‍ನ ಟಾಟು ಮೊಣ್ಣಪ್ಪ ಮತ್ತು ಸಂಗಡಿಗರು ಇದ್ದರು.

ಪೆÇನ್ನಪ್ಪಸಂತೆಯ ಮತಗಟ್ಟೆಯಲ್ಲಿ ಒಟ್ಟು 1044 ಮತದಾರರಲ್ಲಿ 495 ಮತದಾನ ಮಾಡಿದ್ದರೆ, ಬಾಳೆಲೆ ಮತಗಟ್ಟೆಯಲ್ಲಿ 1054 ರಲ್ಲಿ 435 ಮಂದಿ ಮತದಾನ ಮಾಡಿದ್ದು ಒಟ್ಟಾರೆ ಬಾಳೆಲೆ ಕ್ಷೇತ್ರದಲ್ಲಿ ಒಟ್ಟಾರೆ ಶೇ.46.93 ಮತದಾನವಾದ ವರದಿಯಾಗಿದೆ.

ಇಂದು ಹುದಿಕೇರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಪರ ಬಿರುಸಿನ ಪ್ರಚಾರ ಕಂಡುಬಂತು. ಅಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 36 ಎ ನಲ್ಲಿ ಮಧ್ಯಾಹ್ನ 12 ಗಂಟೆಗೆ 1279 ಮತದಾರರಲ್ಲಿ 450 ಮಂದಿ ಮತಚಲಾಯಿಸಿದ್ದರು. ಇದೇ ಸಂದರ್ಭ ಮತದಾರರು ಸರತಿ ಸಾಲಿನಲ್ಲಿ ಮತದಾನ ಮಾಡುವದು ಕಂಡು ಬಂತು. ಇದೇ ಶಾಲೆಯ ಎಡಪಾಶ್ರ್ವ ಮತಗಟ್ಟೆ 36ರಲ್ಲಿ ಒಟ್ಟು 1254 ಮತದಾರರಲ್ಲಿ ಒಟ್ಟು 400 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಪರ ಮಾಜಿ ತಾ.ಪಂ.ಸದಸ್ಯೆ ತೀತಿರ ಊರ್ಮಿಳಾ ಪ್ರಚಾರ ನಡೆಸಿದರೆ, ಕಾಂಗ್ರೆಸ್ ಅಭ್ಯರ್ಥಿ ಪರ ಹಿರಿಯರಾದ ಚೆಕ್ಕೇರ ವಾಸು ಕುಟ್ಟಪ್ಪ ಮುಂತಾದವರು ಮತ ಸೆಳೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು ಕಂಡು ಬಂತು.

ಅತಿ ಸೂಕ್ಷ್ಮ ಮತಗಟ್ಟೆ ಎಂದು ಬಿಂಬಿತವಾಗಿರುವ ಟಿ.ಶೆಟ್ಟಿಗೇರಿ ಮತಗಟ್ಟೆಯಲ್ಲಿ ಶಾಂತಿಯುತ ಮತದಾನ ನಡೆಯಿತು. ಮಧ್ಯಾಹ್ನ 12.30ರ ಸುಮಾರಿಗೆ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 43 ರಲ್ಲಿ ಒಟ್ಟು 934 ರಲ್ಲಿ 360 ಮಂದಿ ಮತಚಲಾಯಿಸಿದ್ದರು. ವೃದ್ಧ ದಂಪತಿ ಸಿ.ಎನ್. ಬೋಪಯ್ಯ (75), ಸೀತಮ್ಮ (67) ಜತೆಯಾಗಿ ಬಂದು ಮತ ಚಲಾಯಿಸಿದ್ದು ವಿಶೇಷವಾಗಿತ್ತು.

ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶರೀನ್‍ಸುಬ್ಬಯ್ಯ, ಶಾಸಕರ ಆಪ್ತರಾದ ಮಲ್ಲಂಡ ಮಧು ದೇವಯ್ಯ, ವೀರಾಜಪೇಟೆ ಪ.ಪಂ.ಸದಸ್ಯ ಜೀವನ್, ಜೋಕಿಮ್, ಜಿ.ಪಂ.ಸದಸ್ಯ ಸಿ.ಕೆ.ಬೋಪಣ್ಣ, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ್, ಬಿಜೆಪಿ ಬೆಂಬಲಿತ ಮಹಿಳಾ ಅಭ್ಯರ್ಥಿ ಬೊಳ್ಳಾಜೀರ ಸುಶೀಲ ಮುಂತಾದವರು ಇದ್ದರು.

ಕುಟ್ಟದ ಮತಗಟ್ಟೆ ಸಂಖ್ಯೆ 42 ರಲ್ಲಿ ಅಪರಾಹ್ನ 2.30 ಗಂಟೆಗೆ 712 ರಲ್ಲಿ 216 ಮತದಾನವಾಗಿದ್ದು ನೀರಸ ವಾತಾವರಣ ಕಂಡುಬಂತು. ಚೂರಿಕಾಡು ಸರ್ಕಾರಿ ಪ್ರಾಥಮಿಕ ಶಾಲಾ ಮತಗಟ್ಟೆ ಸಂಖ್ಯೆ 41 ರಲ್ಲಿ 697 ಮತದಾರರಲ್ಲಿ ಮಧ್ಯಾಹ್ನ 2.45 ಕ್ಕೆ ಒಟ್ಟು 200 ಮಂದಿ ಮಾತ್ರ ಮತಚಲಾಯಿಸಿದ್ದರು.

ಕಾನೂರು ಸ.ಹಿ. ಪ್ರಾಥಮಿಕ ಶಾಲಾ ಮತಗಟ್ಟೆ ಸಂಖ್ಯೆ 34 ರಲ್ಲಿ ಒಟ್ಟು 1312ರಲ್ಲಿ ಒಟ್ಟು 693 ಮತದಾರರು 3.15ರ ಸುಮಾರಿಗೆ ಮತದಾನ ಮಾಡಿದ್ದು, ಕಾಂಗ್ರೆಸ್-ಬಿಜೆಪಿ ಬೆಂಬಲಿಗರ ನಡುವೆ ಉತ್ಸಾಹ ಕಂಡು ಬಂತು.

ಒಟ್ಟಾರೆ ಒಟ್ಟು 43 ಮತಗಟ್ಟೆಗಳಲ್ಲಿ ಯಾವದೇ ಅಹಿತಕರ ಘಟನೆ ನಡೆಯದೆ ಮತದಾನ ಶಾಂತಿಯುತವಾಗಿ ನಡೆಯಿತು.

ಎಲ್ಲೆಡೆ ವ್ಯಾಪಕ ಪೆÇಲೀಸ್ ಬಂದೋಬಸ್ತ್ ಅನ್ನು ಏರ್ಪಡಿಸಲಾಗಿದ್ದು, ಎಲ್ಲ 43 ಮತಪೆಟ್ಟಿಗೆಯನ್ನು ವೀರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಭದ್ರತಾ ಕೊಠಡಿಗೆ ಸಂಜೆ 4 ಗಂಟೆಯ ನಂತರ ಸಾಗಿಸಲಾಯಿತು. ಮತ ಎಣಿಕಾ ಕಾರ್ಯ ತಾ. 14 ರಂದು ಬೆಳಿಗ್ಗೆ 8 ಗಂಟೆಗೆ ವೀರಾಜಪೇಟೆ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ.