ಸೋಮವಾರಪೇಟೆ, ಡಿ. 12: ಮಣ್ಣಿನ ರಕ್ಷಣೆಯೊಂದಿಗೆ ಸಾವಯವ ಕೃಷಿಯಲ್ಲಿ ತೊಡಗಿಕೊಂಡಿರುವ ಅರೆಯೂರು ಗ್ರಾಮದ ಎಸ್.ಬಿ. ಜೋಯಪ್ಪ ಅವರನ್ನು ಕೃಷಿ ಇಲಾಖೆ ಮತ್ತು ಕೃಷಿಕರ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಪ್ರತೀ ವರ್ಷ ಮಣ್ಣು ಪರೀಕ್ಷೆ ಮಾಡಿಸಿ, ಸಾವಯವ ಗೊಬ್ಬರ, ಎರೆ ಹುಳು ಗೊಬ್ಬರವನ್ನು ಉಪಯೋಗಿಸಿ, ತಮ್ಮ 3 ಎಕರೆ ಜಾಗದಲ್ಲಿ ಸೀಬೆ, ಕಾಫಿ, ಸಿಲ್ವರ್, ಕಾಳುಮೆಣಸು, ಅಡಿಕೆ, ಬಾಳೆ ಸೇರಿದಂತೆ ಇನ್ನಿತರ ಮಿಶ್ರ ಬೆಳೆಯನ್ನು ಬೆಳೆದು ಉತ್ತಮ ಫಸಲನ್ನು ಪಡೆಯುತ್ತಿದ್ದಾರೆ.

ವಾರ್ಷಿಕವಾಗಿ ಪ್ರಗತಿಪರ ಕೃಷಿಕರಿಗೆ ಜಯಪ್ಪ ಅವರ ತೋಟದಲ್ಲಿ ಕೃಷಿ ತರಬೇತಿಯನ್ನು ಏರ್ಪಡಿಸಲಾಗುತ್ತಿದ್ದು, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಭಾಗವಹಿಸಿ, ಮಾಹಿತಿ ನೀಡುತ್ತಾರೆ. ಮಣ್ಣು ಸಂರಕ್ಷಣೆ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿರುವ ಜೋಯಪ್ಪ ಅವರನ್ನು ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಅಂಗವಾಗಿ ಕೃಷಿ ಇಲಾಖೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಸನ್ಮಾನಿಸಲಾಯಿತು.

ಈ ಸಂದರ್ಭ ತಾಲೂಕು ಕೃಷಿಕರ ಸಮಾಜದ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಉಪಾಧ್ಯಕ್ಷ ಗೋವಿಂದರಾಜು ಜಿ.ಪಂ. ಸದಸ್ಯೆ ಪೂರ್ಣಿಮ ಗೋಪಾಲ್, ತಾಪಂ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ಇದ್ದರು.