ಸಿದ್ದಾಪುರ, ಡಿ. 12: ದಿಡ್ಡಳ್ಳಿ ಅರಣ್ಯ ಪ್ರದೇಶದಲ್ಲಿ ವಾಸ ಮಾಡಿಕೊಂಡಿದ್ದ ಗಿರಿಜನರನ್ನು ಒಕ್ಕೊಲೆಬ್ಬಿಸಿ ಗುಡಿಸಲುಗಳನ್ನು ನೆಲಸಮ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು ಗಿರಿಜನ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ರಾಜಾರಾವ್ ತೀವ್ರವಾಗಿ ಖಂಡಿಸಿದರು.

ದಿಡ್ಡಳ್ಳಿಯಲ್ಲಿ ನಿರಾಶ್ರಿತರಾಗಿರುವ ಕುಟುಂಬಗಳ ಸಮಸ್ಯೆಯನ್ನು ಆಲಿಸಿದ ಬಳಿಕ ಗುಡಿಸಲು ಕಳೆದುಕೊಂಡಿರುವ ನಿರಾಶ್ರಿತರನ್ನು ಉದ್ದೇಶಿಸಿ ಅವರು ಮಾತನಾಡಿದರು. ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಸಾಕಷ್ಟು ಮಂದಿ ಶ್ರೀಮಂತರು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿದ್ದು, ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಚಕಾರವೆತ್ತದೇ ಇರುವದು ಭ್ರಷ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅವರನ್ನು ಸಂಪರ್ಕಿಸಿದ ರಾಜಾರಾವ್ ಅವರು ದಿಡ್ಡಳ್ಳಿ ಆಶ್ರಮ ಶಾಲೆಯ ಎದುರಿನಲ್ಲಿ ತಾತ್ಕಾಲಿಕವಾಗಿ ವಾಸ ಮಾಡಿಕೊಂಡಿರುವ ಸ್ಥಳದಿಂದ ಒಕ್ಕೊಲೆಬ್ಬಿಸದಂತೆ ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ಶಾಶ್ವತ ಸೂರು ಒದಗಿಸಿಕೊಡುವ ಬೇಡಿಕೆಯನ್ನು ಮುಂದಿಟ್ಟು ಸಂಘಟಿತರಾಗಿ ಗಿರಿಜನರು ಜಿಲ್ಲಾಧಿಕಾರಿಗಳ ಕಚೇರಿ ಎದರು ಆಹೋರಾತ್ರಿ ಪ್ರತಿಭಟನೆ, ಮುಷ್ಕರವನ್ನು ಹಮ್ಮಿಕೊಳ್ಳಲಾಗುವ ದೆಂದು ಎಚ್ಚರಿಕೆ ನೀಡಿದರು. ಗಿರಿಜನ ಮುಖಂಡ ಜೆ.ಕೆ. ಅಪ್ಪಾಜಿ ಮಾತನಾಡಿ, ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು ಗುಡಿಸಲುಗಳನ್ನು ತೆರವುಗೊಳಿಸಿದ ಸಂದರ್ಭ ಗಿರಿಜನ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಈ ಸಂದರ್ಭ ರಾಜಾರಾವ್ ಅವರು ದಿಡ್ಡಳ್ಳಿ ನಿರಾಶ್ರಿತರಿಗೆ ಅವಲಕ್ಕಿ, ತಿಂಡಿ ಹಾಗೂ ಕಾಫಿ ನೀಡಿ ಮಾನವೀಯತೆ ಮೆರೆದರು. ಭೇಟಿ ಸಂದರ್ಭ ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಜೆ.ಕೆ. ಪ್ರಕಾಶ್, ಬಿಜೆಪಿ ಪದಾಧಿಕಾರಿಗಳಾದ ಬಿ.ಕೆ. ಮೋಹನ್, ಡಿ.ಆರ್. ಪ್ರಭಾಕರ್, ಪಿ.ಎಂ. ವಿಜಯ, ಹಾಡಿಯ ಮುಖಂಡೆ ಮುತ್ತಮ್ಮ, ಗ್ರಾ.ಪಂ. ಸದಸ್ಯ ಹೆಚ್.ಸಿ. ಗಣೇಶ್ ಹಾಗೂ ಇತರರು ಹಾಜರಿದ್ದರು.