ಮಡಿಕೇರಿ, ಜು. 18: ವಿದ್ಯಾರ್ಥಿಗಳು ಶಿಕ್ಷಣ ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿರಬೇಕು. ಕೇವಲ ಮಧ್ಯಮ ಶಿಕ್ಷಣಕ್ಕೆ ಸೀಮಿತವಾಗದೆ ಉನ್ನತ ಶಿಕ್ಷಣದತ್ತ ಚಿಂತಿಸಿ ಸಾಧನೆ ಮಾಡಿದರೆ ಉಜ್ವಲ ಭವಿಷ್ಯವಿದೆ ಎಂದು ಮಂಗಳೂರು ವಿಶ್ವ ವಿದ್ಯಾಲಯದ ನೂತನ ರಿಜಿಸ್ಟ್ರಾರ್ ಪ್ರೊ.ಕೆ.ಎಂ. ಲೋಕೇಶ್ ಕರೆ ನೀಡಿದರು.

ಇದಕ್ಕೆ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ಉತ್ತಮ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು. ಇಂದು ಕಾಲೇಜು ಆವರಣದಲ್ಲಿ ನಡೆದ ಸ್ನಾತಕೋತ್ತರ ಮುಕ್ತ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಈ ಕಾಲೇಜಿನಲ್ಲಿ ಅಂತರ್ಜಾಲ ವ್ಯವಸ್ಥೆ ‘ಈ’ ಸೌಲಭ್ಯ, 22 ಕಂಪ್ಯೂಟರ್‍ಗಳ ವ್ಯವಸ್ಥೆ, ಪರಿಣಿತ ಉಪನ್ಯಾಸಕರ ಲಭ್ಯತೆಯಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಅವರು ಕರೆಯಿತ್ತರು.

ಸಮಾರಂಭವನ್ನು ಉದ್ಘಾಟಿಸಿದ ‘ಶಕ್ತಿ’ಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು, ವಿದ್ಯಾರ್ಥಿ - ವಿದ್ಯಾರ್ಥಿನಿಯರು ಯಾವದೇ ಸಂದರ್ಭದಲ್ಲಿ ಉದ್ವೇಗ ಹೊಂದದೆ ಸಮತೋಲನ ಕಾಯ್ದುಕೊಂಡು ಅಭ್ಯಸಿಸಬೇಕೆಂದು ಸಲಹೆಯಿತ್ತರು. ನುರಿತ ಸಹಪಾಠಿಗಳ ಮಾರ್ಗದರ್ಶನ, ಉಪನ್ಯಾಸಕರ ಸಲಹೆ ಪಡೆಯುತ್ತಿರಬೇಕು. ವಿನಯಶೀಲತೆಯೊಂದಿಗೆ ವಿದ್ಯೆ ಕಲಿಯುವ ಸಂದರ್ಭ ಕುಟುಂಬ ವರ್ಗದೊಂದಿಗೂ ಪ್ರೀತಿಯಿಂದ ಮಿಳಿತಗೊಳ್ಳುವ ಗುಣ ಹೊಂದಿದ್ದರೆ ಶೈಕ್ಷಣಿಕ ಕ್ಷೇತ್ರದಲ್ಲಿಯು ಯಶಸ್ಸು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು.

ಪ್ರಾರಂಭಿಕವಾಗಿ ಮಾತನಾಡಿದ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಅವರು ಕಾಲೇಜಿನಲ್ಲಿ ಸ್ನಾತಕೋತ್ತರ ಹಾಗೂ ಇತರ ಎಲ್ಲ ವಿಭಾಗಗಳಿಗೆ ಅಗತ್ಯವಾದಂತಹ ಪುಸ್ತಕಗಳನ್ನು ಹೊಂದಿರುವ ಗ್ರಂಥಾಲಯವಿದೆ ಹಾಗೂ ಇತರ ಎಲ್ಲ ಸೌಲಭ್ಯಗಳಿವೆ. ನಿರಂತರ ಸಾಧನೆಯಿಂದ ವಿದ್ಯಾರ್ಥಿಗಳು ಯಶಸ್ಸು ಸಾಧಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕ ಪೂಣಚ್ಚ ಕಾರ್ಯಕ್ರಮ ನಿರೂಪಿಸಿದರೆ, ಉಪನ್ಯಾಸಕರುಗಳಾದ ಶ್ರೀಧರ್ ಹೆಗಡೆ, ರವಿಶಂಕರ್ ಇವರುಗಳು ಅತಿಥಿಗಳನ್ನು ಪರಿಚಯಿಸಿದರು. ವೇದಿಕೆಯಲ್ಲಿ ಸ್ನಾತಕೋತ್ತರ ಉಪನ್ಯಾಸಕರುಗಳಾದ ಟಿ.ಡಿ. ತಿಮ್ಮಯ್ಯ, ಜಗನ್ನಾಥ್, ಕೆ.ಎಸ್. ನಯನ, ವಿಜಯಲತಾ ಇವರುಗಳು ಉಪಸ್ಥಿತರಿದ್ದರು.