ಭಾಗಮಂಡಲ, ಜು. 18: ದಕ್ಷಿಣದ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಪವಿತ್ರ ತೀರ್ಥಕ್ಷೇತ್ರ ಭಾಗಮಂಡಲ ಹಾಗೂ ತಲಕಾವೇರಿಗೆ ರಸ್ತೆ ಸಂಚಾರ ಸ್ಥಗಿತಗೊಳ್ಳುತ್ತದೆಯೇ ಎಂಬ ಅನುಮಾನ ಕ್ಷೇತ್ರದ ಜನತೆಯನ್ನು ಕಾಡಲಾರಂಭಿಸಿದೆ. ಭಾಗಮಂಡಲ ಸಮೀಪದ ಚೆದ್ಕಾರ್ ಎಂಬಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ ಸೇತುವೆಯೂ ಕುಸಿಯುವ ಭೀತಿಯುಂಟಾಗಿದ್ದು, ತೀರ್ಥ ಕ್ಷೇತ್ರಕ್ಕೆ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಮಡಿಕೇರಿಯಿಂದ ಭಾಗಮಂಡಲಕ್ಕೆ ತೆರಳುವಾಗ ಭಾಗಮಂಡಲ ಕಾವೇರಿ ಕಾಲೇಜು ಸಮೀಪ ಚೆದ್ಕಾರ್ ಎಂಬಲ್ಲಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ ಸೇತುವೆ ಇದೆ. ಈ ಸೇತುವೆ ತುಂಬಾ ಹಳೆಯದಾದ, ಕಿರಿದಾದ ಕಾರಣ ಒಂದೇ ವಾಹನ ಚಲಿಸುವಂತಿತ್ತು. ಈ ಹಿನ್ನೆಲೆಯಲ್ಲಿ ಕಳೆದ 15ವರ್ಷಗಳ ಹಿಂದೆ ನೂತನ ಸೇತುವೆಯನ್ನು ಪರ್ಯಾಯ ಭಾಗದಲ್ಲಿ ನಿರ್ಮಿಸಲಾಗಿತ್ತು. ಆದರೆ ಈ ನೂತನ ಸೇತುವೆಯಲ್ಲಿ ಕಳೆದ ಡಿ. 31ರಂದು ಕುಸಿಯುವ ಹಂತದ ದೃಶ್ಯ ಗೋಚರವಾಯಿತು.

ಅಂದು ಅಲ್ಲಿನ ಸೇತುವೆಯ ಕೆಳಭಾಗದ ನದಿಯಲ್ಲಿ ಅಯ್ಯಪ್ಪ ಭಕ್ತರು ಸ್ನಾನ ಮಾಡಿ ಸೇತುವೆಯ ಮೇಲ್ಭಾಗದಲ್ಲಿ ನಡೆಯುತ್ತಿದ್ದ ಸಂದರ್ಭ ಸೇತುವೆಯ ಒಂದು ಭಾಗ ಕೆಳಭಾಗಕ್ಕೆ ವಾಲಿದಂತೆ ಕಂಡು ಬಂದಿತು. ಈ ಸ್ಥಿತಿಯನ್ನು ಕಂಡು ದಂಗಾದ ಅಯ್ಯಪ್ಪ ಭಕ್ತರು ಸೇತುವೆಯ ಕೆಳಭಾಗ ನೋಡಿದಾಗ ಇದಕ್ಕೆ ಆಧಾರವಾಗಿದ್ದ ಸಿಮೆಂಟು ಕಂಬಗಳು ಅಲ್ಲಲ್ಲಿ ಪುಡಿಯಾಗಿ ಕುಸಿಯುತ್ತಿರುವ ದೃಶ್ಯ ಗೋಚರಿಸಿತು. ಕೂಡಲೇ ಅವರು ಭಾಗಮಂಡಲ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರು.

ಪೊಲೀಸರು ಕೂಡ ತಕ್ಷಣ ಸ್ಪಂದಿಸಿ ಅಪಾಯವರಿತು ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಿ ಬ್ಯಾರಿಕೇಡ್ ಅಳವಡಿಸಿದರು. ಸೇತುವೆ ದುರಸ್ತಿಗೊಂಡು ಸುಸ್ಥಿತಿ ಗೊಳ್ಳುವವರೆಗೂ ಈ ಸೇತುವೆಯ ಮೂಲಕ ಸಂಚಾರವನ್ನು ಬಂದ್ ಮಾಡುವದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಈ ನಡುವೆ ವಿಷಯ ತಿಳಿದ ಜಿಲ್ಲಾ ಲೋಕೋಪಯೋಗಿ ಸಹಾಯಕ ಅಭಿಯಂತರರಾಗಿದ್ದ ಸತ್ಯನಾರಾಯಣ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಬಂದು ಸ್ಥಳ ಪರಿಶೀಲನೆ ಮಾಡಿದಾಗ ಅವರಿಗೆ ಸೇತುವೆಯ ಕೆಳಭಾಗದ ಆಧಾರಸ್ತಂಭ ವಾಗಿರುವ ಸಿಮೆಂಟು ಕಂಬಗಳು ಪುಡಿಯಾಗಿ ಮುರಿದು ಬೀಳುವ ಸನ್ನಿವೇಶದಲ್ಲಿರುವದನ್ನು ಗಮನಿಸಿ ಪರಿಸ್ಥಿತಿಯ ಗಂಭೀರತೆಯ ಅರಿವುಂಟಾಗಿತ್ತು. ಬೃಹತ್ ಗಾತ್ರದ ಟಿಂಬರ್‍ಗಳನ್ನು ಹೊತ್ತ ಲಾರಿಗಳು ಈ ಸೇತುವೆಯ ಮೇಲೆ ಸಂಚರಿಸುವ ಮೂಲಕ ತೀವ್ರ ಹಾನಿವುಂಟು ಮಾಡಿರುವದಾಗಿ ಅಭಿಪ್ರಾಯ ಪಟ್ಟಿದ್ದರು.

ತಳಭಾಗದಲ್ಲಿ ಜ್ಯಾಕ್‍ವೀಲ್ ಯಂತ್ರದ ಮೂಲಕ ಸೇತುವೆಯ ಮೇಲ್ಭಾಗವನ್ನು ಮೇಲಕ್ಕೆತ್ತಿ ಕೆಳಭಾಗದಲ್ಲಿ ಕಂಬಗಳನ್ನು ಸಂಪೂರ್ಣವಾಗಿ ಪುನರ್ ನಿರ್ಮಾಣ ಮಾಡಬೇಕಾಗಿದೆ. ಇದಕ್ಕೆ ಕನಿಷ್ಟ 20 ದಿನಗಳ ಕಾಲಾವಕಾಶ ಅಗತ್ಯವಿದೆ. ಸೇತುವೆ ಕುಸಿಯುತ್ತಿರುವ ವಿಚಾರ ತಕ್ಷಣ ಗಮನಕ್ಕೆ ಬಂದುದರಿಂದ ದುರಸ್ತಿಗೊಳಿಸ ಬಹುದಾಗಿದೆ ಎಂದು ತಿಳಿಸಿದರು. ‘ಶಕ್ತಿ’ ಸವಿವರವಾದ ವರದಿಯನ್ನು ಅಂದು ಪ್ರಕಟಿಸಿತ್ತು.

ಆದರೆ 20ದಿನಗಳು ಹೋಗಿ

6 ತಿಂಗಳುಗಳೇ ಕಳೆದಿದೆ. ಆದರೂ ಸೇತುವೆಯ ದುರಸ್ತಿ ಕಾರ್ಯ

ಮಾತ್ರ ನಡೆದಿಲ್ಲ. ಈ ಮಧ್ಯೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸೇತುವೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಸೇತುವೆ ಕಾಮಗಾರಿ ಗುಣಮಟ್ಟ ದಿಂದ ನಡೆದಿಲ್ಲ. ಕಳಪೆಯಿಂದ ಕೂಡಿತ್ತು ಎಂಬ ವರದಿಯನ್ನು ಸರ್ಕಾರಕ್ಕೆ ಕಳುಹಿಸಿದರು. ಇದರಿಂದಾಗಿ ಸೇತುವೆ ದುರಸ್ತಿಗೆ ಹಣವೂ

ಬಿಡುಗಡೆಯಾಗದೆ ಸೇತುವೆ ದುರಸ್ತಿ ಕಾಣಲೇ ಇಲ್ಲ. ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತಿನಂತೆ ಸೇತುವೆ ಕಾಮಗಾರಿಯ ಗುತ್ತಿಗೆದಾರರು ಹಾಗೂ ಸರ್ಕಾರದ ಗುದ್ದಾಟದಿಂದಾಗಿ ಕ್ಷೇತ್ರದ ಭಕ್ತರಿಗೆ ಹಾಗೂ ಸವಾರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ನೂತನ ಸೇತುವೆ ಕುಸಿತವುಂಟಾ ದಾಗ ಹಳೇ ಬ್ರಿಟೀಷರ ಕಾಲದ ಸೇತುವೆಯ ಮೇಲೆ ಮತ್ತೆ ವಾಹನ ಸಂಚಾರವನ್ನು ಆರಂಭಿಸಲಾಗಿತ್ತು. ಆದರೆ ಇದೀಗ ಬ್ರಿಟೀಷರ ಕಾಲದ ಸೇತುವೆಯ ಕೆಳಭಾಗದಲ್ಲಿ ಮಣ್ಣು ಕುಸಿಯುತ್ತಿದ್ದು, ರಸ್ತೆ ಸಂಪೂರ್ಣ ಗುಂಡಿ ಬಿದ್ದಿದೆ. ಇದೀಗ ಅಪಾಯ ಸ್ಥಿತಿ ಕಂಡು ಬಂದಿದ್ದು, ಮತ್ತೆ ರಸ್ತೆ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ತಿರುವು ರಸ್ತೆಯಲ್ಲಿ ಸೇತುವೆ ಇದ್ದು, ಇಲ್ಲಿನ ನೂತನ ಸೇತುವೆಯ ಮೇಲ್ಭಾಗದಲ್ಲಿ ಮಣ್ಣು ರಾಶಿ ಹಾಕಿರುವದರಿಂದ 15ಕ್ಕೂ ಅಧಿಕ ದ್ವಿಚಕ್ರ ವಾಹನಗಳು ಉರುಳಿ, ವಾಹನ ಸವಾರರು ಬಿದ್ದು ಗಾಯವಾಗಿರುವ ಘಟನೆಯೂ ನಡೆದಿದೆ. ಈ ಸೇತುವೆ ಸಂಪರ್ಕದ ಮೂಲಕ ದಿನನಿತ್ಯ 50ಕ್ಕೂ ಅಧಿಕ ಬಸ್, ಶಾಲಾ ವಾಹನಗಳು ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿದ್ದು, ಸೇತುವೆ ಸಂಪೂರ್ಣ ಕುಸಿದಲ್ಲಿ ತೀವ್ರ ತೊಂದರೆ ಎದುರಿಸಬೇಕಾಗಿದೆ.ಸೇತುವೆ ಸಂಪೂರ್ಣವಾಗಿ ಕುಸಿಯುವ ಮುನ್ನ ಸಂಬಂಧಿಸಿದ ಇಲಾಖೆ ಎಚ್ಚೆತ್ತುಕೊಳ್ಳುವಂತೆ ತೀರ್ಥಕ್ಷೇತ್ರದ ಜನತೆ ಆಗ್ರಹಿಸಿದ್ದಾರೆ.