ಕೂಡಿಗೆ, ಜು. 18: ಹಾರಂಗಿ ಅಣೆಕಟ್ಟೆಯಿಂದ ಮುಂದಿನ ದಿನಗಳಲ್ಲಿ ನಾಲೆಗಳ ಮೂಲಕ ರೈತರ ಜಮೀನುಗಳಿಗೆ ನೀರು ಹರಿಬಿಡಲು ಸಿದ್ಧತೆಗಳು ನಡೆಯುತ್ತಿದ್ದರೂ ಮುಖ್ಯ ನಾಲೆಯಲ್ಲಿ ಅಡ್ಡಲಾಗಿ ಬಿದ್ದಿರುವ ಬೃಹತ್ ಮರಗಳನ್ನು ತೆರವುಗೊಳಿಸದೆ, ನೀರು ಹರಿಸುವಿಕೆಗೆ ಇಲಾಖೆಯ ಅಧಿಕಾರಿಗಳು ಸಿದ್ಧಪಡಿಸುತ್ತಿರುವದು ಸರಿಯಾದ ಕ್ರಮವಲ್ಲ. ನಾಲೆಗೆ ಬಿದ್ದಿರುವ ಮರಗಳನ್ನು ತೆರವುಗೊಳಿಸಿ, ನೀರು ಹರಿಸುವಿಕೆ ಮತ್ತು ರೈತರ ಜಮೀನುಗಳಿಗೆ ನೀರು ಹೋಗುವ ತೂಬುಗಳಲ್ಲಿ ಅಡಚಣೆ ಉಂಟಾಗದಂತೆ ತುರ್ತು ಕ್ರಮಕೈಗೊಳ್ಳಬೇಕೆಂದು ನೀರು ಬಳಕೆದಾರರ ಸಂಘದ ಅಧ್ಯಕ್ಷ ಐ.ಎಸ್.ಗಣೇಶ ಹಾಗೂ ಸಮಿತಿಯ ನಿರ್ದೇಶಕರು ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗೆ ಸಿದ್ಧರಾಗಲು ಉಪನಾಲೆಗಳ ಮೂಲಕ ರೈತರಿಗೆ ನೀರು ಅವಶ್ಯವಾಗಿದೆ. ಆದರೆ ಕಳೆದ ವಾರ ಉಪನಾಲೆಗಳ ದುರಸ್ಥೆಯ ಮತ್ತು ಕಾಡು ಕಡಿಯುವಿಕೆಯ ಟೆಂಡರ್ ಪ್ರಕ್ರಿಯೆ ನಡೆಸಿ, ದುರಸ್ತಿಗೆ ಹೊರಟಿರುವ ಕ್ರಮ ಸಮಂಜಸವಲ್ಲ. ದುರಸ್ತಿಗಳನ್ನು ಬೇಸಿಗೆ ಸಂದರ್ಭದಲ್ಲಿ ಸರಿಪಡಿಸದೆ ಮಳೆಗಾಲದಲ್ಲಿ ಕಾಲುವೆಯಲ್ಲಿ ನೀರು ಇರುವ ಸಂದರ್ಭ ಸರಿಪಡಿಸಲು ಹೊರಟಿರುವದು ಸರಿಯಾದ ಕ್ರಮವಲ್ಲ ಎಂದು ಆಗ್ರಹಿಸಿದ್ದಾರೆ.