ಕುಶಾಲನಗರ, ಜ. 26: ರಾಷ್ಟ್ರದ ಸಂಪತ್ತನ್ನು ಸದುಪಯೋಗ ಗೊಳಿಸುವದರೊಂದಿಗೆ ಉಳಿಸಿ ಬೆಳೆಸುವದು ಪ್ರಜೆಗಳ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಶಕ್ತಿ ದಿನಪತ್ರಿಕೆ ಸಂಪಾದಕರಾದ ಬಿ.ಜಿ. ಅನಂತಶಯನ ಹೇಳಿದರು.ಅವರು ಮಡಿಕೇರಿಯ ವಿಕಾಸ್ ಜನಸೇವಾ ಟ್ರಸ್ಟ್ ಆಶ್ರಯದಲ್ಲಿ ಮಡಿಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ, ರೋವರ್ ಮತ್ತು ರೇಂಜರ್ಸ್ ಘಟಕಗಳ ಸಹಯೋಗ ದೊಂದಿಗೆ ನಡೆದ 68ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಅಶಕ್ತರಿಗೆ ಸಾಂತ್ವನದೊಂದಿಗೆ ನೋವು, ನಲಿವಿಗೆ ಸ್ಪಂದಿಸಿ ತ್ಯಾಗ ಮನೋಭಾವದಿಂದ ಸೇವೆ ಸಲ್ಲಿಸುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹಿರಿಯರಿಗೆ ಪ್ರೀತಿ, ಗೌರವ ನೀಡುವದು ಮಕ್ಕಳ ಜವಾಬ್ದಾರಿಯಾಗಿದೆ ಎಂದರು. ಕರ್ತವ್ಯ ಮತ್ತು ಜವಾಬ್ದಾರಿಯೊಂದಿಗೆ ಯುವ ಪೀಳಿಗೆ ದೇಶಾಭಿಮಾನ ಮೈಗೂಡಿಸಿಕೊಳ್ಳುವಂತೆ ಅವರು ಕರೆಯಿತ್ತರು.

ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಸರಕಾರದ ಅನುದಾನಗಳ ಸದ್ಬಳಕೆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವದು ಎಲ್ಲರ ಗುರಿಯಾಗಿರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ನಗರಸಭೆ ಸದಸ್ಯ ಕೆ.ಎಸ್.ರಮೇಶ್ ಮಾತನಾಡಿ, ವಿಶೇಷಚೇತನರ ರಕ್ಷಣೆ, ಪೋಷಣೆ ಮಾಡುತ್ತಿರುವ ವಿಕಾಸ್ ಸಂಸ್ಥೆಯ ಪದಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಚಂದ್ರಮೋಹನ್ ಮಾತನಾಡಿ, ಸ್ವಾರ್ಥರಹಿತ ಸೇವೆಯೊಂದಿಗೆ ಪ್ರತಿಯೊಬ್ಬರನ್ನೂ ಸಮಾಜದ ಮುಖ್ಯವಾಹಿನಿಗೆ ಕರೆ ತರುವಲ್ಲಿ ಸಂಘ - ಸಂಸ್ಥೆಗಳ ಪಾತ್ರ ಬಹುಮುಖ್ಯದ್ದಾಗಿದೆ ಎಂದರು. ಹಿರಿಯ ನಾಗರಿಕರು ಮತ್ತು ವಿಶೇಷಚೇತನರ ಸಬಲೀಕರಣ ಇಲಾಖೆಯ ಅಧಿಕಾರಿ ಜಗದೀಶ್ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಇಲಾಖೆಯಿಂದ ಸಹಕಾರ ನೀಡುವ ಭರವಸೆ ನೀಡಿದರು.

ಈ ಸಂದರ್ಭ ಕೊಡಗು ಜಿಲ್ಲಾ ವಿಶೇಷಚೇತನರ ಸಂಘದ ಜಿಲ್ಲಾ ಅಧ್ಯಕ್ಷ ಟಿ.ಎ.ಮಹೇಶ್ವರ, ವಿಕಾಸ್ ಜನಸೇವಾ ಟ್ರಸ್ಟ್ ವ್ಯವಸ್ಥಾಪಕ ಹೆಚ್.ಕೆ.ರಮೇಶ್ ಇದ್ದರು. ಶಿಬಿರದ ಅಂಧ ವಿದ್ಯಾರ್ಥಿ ಶಿವು ಅವರು ಹಾಡಿದರು. ಕಾಲೇಜು ವಿದ್ಯಾರ್ಥಿಗಳು ಸಂಸ್ಥೆಯ ಆಶ್ರಿತರಿಗೆ ಮತ್ತು ಸಭಿಕರಿಗೆ ಸಿಹಿ ಹಂಚಿದರು. ಉದ್ಯಮಿಗಳಾದ ಜಯಂತ್ ಮತ್ತು ಶಂಕರ್ ಸಂಸ್ಥೆಯ ಆಶ್ರಿತರಿಗೆ ಮಧ್ಯಾಹ್ನ ಭೋಜನದ ವ್ಯವಸ್ಥೆ ಕಲ್ಪಿಸಿದರು.

ಶಿಕ್ಷಕಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು, ಚಂದನ್ ಸ್ವಾಗತಿಸಿದರು, ಕವನ್ ಕುಮಾರ್ ವಂದಿಸಿದರು.