ಕುಶಾಲನಗರ, ಜ. 26: ದೇಶ ಸೇವೆಯ ಚಿಂತನೆಯೊಂದಿಗೆ ಯುವಪೀಳಿಗೆ ಅಧಿಕ ಸಂಖ್ಯೆಯಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಗೊಳ್ಳಬೇಕಿದೆ ಎಂದು ಭಾರತೀಯ ಭೂಸೇನೆಯ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ಕರೆ ನೀಡಿದರು.ಪಟ್ಟಣ ಪಂಚಾಯ್ತಿ ಕುಶಾಲನಗರದ ಆಶ್ರಯದಲ್ಲಿ ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 68ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ದಿನದ ಸಂದೇಶ ನೀಡಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮೂಲಕ ಭಾರತ ಪ್ರಬಲವಾಗಿ ಬೆಳೆಯುತ್ತಿರುವ ದೇಶಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಗಳಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ದೇಶವನ್ನು ಮತ್ತಷ್ಟು ಪ್ರಬಲವಾಗಿಸುವಲ್ಲಿ ಯುವಜನಾಂಗ ಪಾತ್ರ ಪ್ರಮುಖವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧ್ವಜಾರೋಹಣ ನೆರವೇರಿಸಿದ ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷರಾದ ಎಂ.ಎಂ.ಚರಣ್ ಮಾತನಾಡಿ, ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕಿದೆ. ಹಾದಿ ತಪ್ಪುತ್ತಿರುವ ಯುವಪೀಳಿಗೆ ಬಗ್ಗೆ ಪೋಷಕರು ಕಾಳಜಿ ವಹಿಸಿ ಸನ್ಮಾರ್ಗದಲ್ಲಿ ನಡೆಸಬೇಕಿದೆ ಎಂದರು.

ಸಮಾರಂಭದಲ್ಲಿ ಭಾರತೀಯ ಭೂಸೇನೆಯ ನಿವೃತ್ತ ಸೈನಿಕರಾದ ಎಂ.ವಿ.ಭಾಸ್ಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಉಪಾಧ್ಯಕ್ಷರಾದ ಉಪ ತಹಶೀಲ್ದಾರ್ ನಂದಕುಮಾರ್, ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೇಗೌಡ ಉಪಸ್ಥಿತರಿದ್ದರು.

ಶಿಕ್ಷಕರಾದ ಸದಾಶಿವಯ್ಯ ಎಸ್.ಪಲ್ಲೇದ್ ಪರೇಡ್ ಕಮಾಂಡಂಟ್ ಆಗಿ ಕಾರ್ಯನಿರ್ವಹಿಸುವುದರೊಂದಿಗೆ ಆಕರ್ಷಕ ಪಥಸಂಚಲನ ನಡೆಯಿತು.

ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಎನ್‍ಸಿಸಿ ತಂಡಗಳಿಂದ ಪಥಸಂಚಲನ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

ಹಾಸನ ಹಾಲು ಒಕ್ಕೂಟದಿಂದ ಉಚಿತವಾಗಿ ವಿತರಣೆಗೊಂಡ ಸಿಹಿ ಹಾಲನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಮಹೇಶ್ ಅಮೀನ್ ವಂದೇಮಾತರಂ ಗೀತೆ ಹಾಡಿದರು. ಶಿಕ್ಷಕರಾದ ಸವರಿನ್ ಡಿಸೋಜ, ಮಾರ್ಗರೇಟ್ ಕಾರ್ಯಕ್ರಮ ನಿರೂಪಿಸಿದರು, ಕಾರ್ಯದರ್ಶಿ ಹೆಚ್.ಎಂ.ರಘು ಸ್ವಾಗತಿಸಿದರು. ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ವಂದಿಸಿದರು.