ನಾಪೋಕ್ಲು, ಜ. 26: ಸಮೀಪದ ಕೊಳಕೇರಿ ಗ್ರಾಮದ ಕುವಲೆಕಾಡು ಸೇತುವೆ ಬಳಿ ಕಾರನ್ನು ಅಡ್ಡಗಟ್ಟಿ ನಾಲ್ವರ ಮೇಲೆ ಹಲ್ಲೆ ನಡೆಸಿ ದೋಚಿರುವದಾಗಿ ವೀರಾಜಪೇಟೆ ತೆಲುಗರ ಬೀದಿ ನಿವಾಸಿ ದಿಲೀಪ್ ಪೆಮ್ಮಯ್ಯ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ 12 ಜನರ ತಂಡದ ಮೇಲೆ ಜಾತಿ ನಿಂದನೆ, ಕೊಲೆಯತ್ನ ಮೊಕದ್ದಮೆ ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ತೆಲುಗರ ಬೀದಿ ನಿವಾಸಿ ಮರದ ಕೆಲಸ ಮಾಡುತ್ತಿದ್ದ ಮಹಮ್ಮದ್ ಹನೀಫ್(46), ಕೊಳಕೇರಿ ಕುವಲೆಕಾಡು ನಿವಾಸಿ ಬಷೀರ್ (19) ರನ್ನು ನಿನ್ನೆ ಸಂಜೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ವೀರಾಜಪೇಟೆ ತೆಲುಗರ ಬೀದಿ ನಿವಾಸಿ ದಿಲೀಪ್‍ಪೆಮ್ಮಯ್ಯ, ಮಹಮದ್ ಹನೀಫ್ ಎಂಬವರ ಮಗಳು ರಜಿಯಾಭಾನು ಎಂಬ ಯುವತಿಯನ್ನು ಪ್ರೀತಿಸುತ್ತಿದ್ದು, ಪೋಷಕರಿಗೆ ವಿಷಯ ತಿಳಿದು ಯುವತಿಯನ್ನು ಕೊಳಕೇರಿ ಕುವಲೆಕಾಡಿನ ಬಂಧುಗಳ ಮನೆಯಲ್ಲಿ ವಾರಗಳ ಹಿಂದೆ ಬಚ್ಚಿಡಲಾಗಿತ್ತು ಎನ್ನಲಾಗಿದೆ. ದಿಲೀಪ್ ಹಾಗೂ ಯುವತಿಯ ನಡುವೆ ಮೊಬೈಲ್ ಸಂಪರ್ಕ ಇದ್ದು, ತನ್ನನ್ನು ಕರೆದುಕೊಂಡು ಹೋಗುವಂತೆ ಯುವತಿ ಒತ್ತಾಯಿಸಿದ್ದಳು. ತಾ. 24 ರಂದು ದಿಲೀಪ್‍ಗೆ ಮೊಬೈಲ್ ಕರೆ ಬಂದಿದ್ದು, ನೀನು ಹುಡುಗಿಯನ್ನು ಚೆನ್ನಾಗಿ ನೋಡಿಕೋ ನಾವು ಒಪ್ಪಿದ್ದೇವೆ. ಇಂದೇ ಕರೆದುಕೊಂಡು ಹೋಗು ಎಂದು ನಂಬಿಸಿದ್ದು, ಸೂಚನೆ ಮೇರೆಗೆ ದಿಲೀಪ್ ತನ್ನ ಸ್ನೇಹಿತರಾದ ನವೀನ್, ಸುರೇಶ್ ಜೊತೆಗೂಡಿ ಕುಶಾಲಪ್ಪ ಎಂಬವರ ಸ್ವಿಫ್ಟ್ ಕಾರಿನಲ್ಲಿ ರಾತ್ರಿ ಮೊಬೈಲ್ ಸೂಚನೆ ಅನುಸಾರದಂತೆ ಕೊಳಕೇರಿ ಕುವಲೆ ಕಾಡು ಸೇತುವೆ ಬಳಿ ಬಂದಿದ್ದರು. ವಿಷಯ ತಿಳಿಯುತ್ತಿದ್ದಂತೆ ವಾಹನವನ್ನು ಅಡ್ಡಗಟ್ಟಿರುವ ತಂಡ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಲ್ಲದೆ ಕಾರನ್ನು ಜಖಂಗೊಳಿಸಲಾಗಿದೆ. ದಿಲೀಪ್ ಪೆಮ್ಮಯ್ಯ ನೀಡಿದ ದೂರಿನ ಮೇರೆಗೆ 12ಮಂದಿಯ ಮೇಲೆ ಮೊಕದ್ದಮೆ ದಾಖಲಾಗಿದೆ. ಹಲ್ಲೆಗೊಳಗಾದ ಕುಶಾಲಪ್ಪ, ಸುರೇಶ್, ನವೀನ್ ಹಾಗೂ ದಿಲೀಪ್ ಅವರು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಛಬ್ಬಿ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ನಾಪೋಕ್ಲು ಎಸ್‍ಐ ಬಿ.ಎಸ್. ವೆಂಕಟೇಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ 12 ಜನರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.