ನಾಪೆÇೀಕ್ಲು, ಜ. 1: ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ವತಿಯಿಂದ ಸಮೀಪದ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ರಸಪ್ರಶ್ನೆ ಸ್ಪರ್ಧೆಯಲ್ಲಿ ನಾಪೆÇೀಕ್ಲು ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನಗಳಿಸಿ ಟ್ರೋಫಿ ಮತ್ತು ನಗದು ಪುರಸ್ಕಾರವನ್ನು ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಚೆಯ್ಯಂಡಾಣೆಯ ನರಿಯಂದಡ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ಹಾಗೂ ತೃತೀಯ ಸ್ಥಾನವನ್ನು ಅರಮೇರಿ ಕಳಂಚೇರಿ ಮಠದ ಎಸ್‍ಎಂಎಸ್ ವಿದ್ಯಾಸಂಸ್ಥೆಯ ತಂಡ ಪಡೆಯಿತು.

ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಅಂತರ ಪ್ರೌಢಶಾಲಾ ಸಾಮಾನ್ಯ ಜ್ಞಾನದ ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಎಂ.ಎನ್. ಕೇಶವ ಮತ್ತು ಕೆ.ಪಿ. ಸುಬ್ಬಯ್ಯ 97 ಅಂಕಗಳಿಸಿ ಪ್ರಥಮ ಸ್ಥಾನ ಪಡೆದರೆ, ನರಿಯಂದಡ ಪ್ರೌಢಶಾಲೆಯ ಹೆಚ್.ಎನ್. ಕುಸುಮ ಮತ್ತು ಎಂ.ಎ. ಮನೋಜ್ 57 ಅಂಕಗಳಿಸಿ ದ್ವಿತೀಯ ಸ್ಥಾನ ಹಾಗೂ ಅರಮೇರಿ ಎಸ್‍ಎಂಎಸ್ ಶಾಲೆಯ ವಿದ್ಯಾರ್ಥಿ ಗಳಾದ ಯು.ಜೆ. ಶೀತಲ್ ಮತ್ತು ಫಾತಿಮಾ ತಸ್ಲಿನಾ 52 ಅಂಕಗಳಿಸಿ ತೃತೀಯ ಸ್ಥಾನ ಪಡೆದರು. ವೀರಾಜ ಪೇಟೆಯ ರೋಟರಿ ವಿದ್ಯಾಸಂಸ್ಥೆಯ ತಂಡ ಮತ್ತು ಸೋಮವಾರಪೇಟೆಯ-ಗೋಣಿಮರೂರು ಶಾಲೆಯ ತಂಡ ಸಮಾಧಾನಕರ ಬಹುಮಾನ ಪಡೆಯಿತು. ಸಭಾ ಕಾರ್ಯಕ್ರಮವನ್ನು ನಿವೃತ್ತ ಪ್ರಾಧ್ಯಾಪಕಿ ಡಾ. ಸುಲೋಚನಾ ನಾರಾಯಣ ಉದ್ಘಾಟಿಸಿ ಮಾತನಾಡಿ, ಅವಕಾಶಗಳು ನಮ್ಮನ್ನು ಬೆಳೆಸುತ್ತವೆ. ಮಕ್ಕಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸುವ ಅವಕಾಶದಿಂದ ವಂಚಿತರಾಗದಂತೆ ನೋಡಿಕೊಳ್ಳ ಬೇಕಾದದ್ದು ಶಿಕ್ಷಕರ ಕರ್ತವ್ಯ. ನಾಲ್ಕು ಗೋಡೆಗಳ ನಡುವಿನ ಕಲಿಕೆಯೇ ಬೇರೆ. ಬದುಕಿನ ಅನುಭವಗಳೇ ಬೇರೆ ಎಂದರು. ಉತ್ತಮ ಜೀವನ ಮೊದಲು ವ್ಯಕ್ತಿಯಿಂದ ಆರಂಭಗೊಂಡು ನಂತರ ಕುಟುಂಬ, ಬಳಿಕ ಸಮುದಾಯಗಳ ಮೂಲಕ ಮುಂದುವರಿಯಲಿದ್ದು, ನಾವು ನಮ್ಮ ಬದುಕನ್ನು ಸರಿಪಡಿಸಿಕೊಂಡರೆ ಮಾತ್ರ ಸಮಾಜ ದೊಂದಿಗೆ ಸೌಹಾರ್ದಯುತವಾಗಿ ಬದುಕಲು ಸಾಧ್ಯ ಎಂದರು. ನಮ್ಮ ಶಕ್ತಿ ಮತ್ತು ದೌರ್ಬಲ್ಯಗಳ ತುಲನೆ ಮಾಡಿ ದೌರ್ಬಲ್ಯವನ್ನು ಬಿಟ್ಟು ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಸಮಾಜ ಸೇವೆಯಿಂದ ವ್ಯಕ್ತಿ ಮೇಲೇರುವ ಆತ್ಮವಿಶ್ವಾಸವನ್ನು ಬೆಳೆಸಿ ಕೊಳ್ಳಬೇಕು ಎಂದರು. ಕಾರ್ಯ ಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ಎಂ.ಎಸ್. ಸುಬ್ರಹ್ಮಣ್ಯ, ಮೇಜರ್ ಎಸ್.ಕೆ. ವೆಂಕಟಗಿರಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಎನ್. ಹರಿಶಂಕರ ಪ್ರಸಾದ್ ವಹಿಸಿದ್ದರು. ರಸಪ್ರಶ್ನೆ ನಿರ್ವಾಹಕರಾಗಿ ಶಿಕ್ಷಕರಾದ ಪಿ.ಆರ್. ಅಯ್ಯಪ್ಪ ಹಾಗೂ ಸಿ.ಎಸ್. ಸುರೇಶ್ ಪಾಲ್ಗೊಂಡಿದ್ದರು.

ಈ ಸಂದರ್ಭ ಚೆಯ್ಯಂಡಾಣೆಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಚಂಪಕ, ಸಂಘದ ನಿರ್ದೇಶಕರಾದ ಮಕ್ಕಿಮನೆ ಸುಧೀರ್, ಪಿ.ಎನ್. ನಾಗರಾಜ್, ಕುಕ್ಕೆಮನೆ ನಾರಾಯಣ ಮೂರ್ತಿ ಹಾಗೂ ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಕುಕ್ಕೆಮನೆ ಸುಬ್ರಹ್ಮಣ್ಯ ಸ್ವಾಗತಿಸಿ, ಎನ್.ಎಸ್. ಉದಯಶಂಕರ್ ವಂದಿಸಿದರು.