ಕುಶಾಲನಗರ, ಜ. 1: ಸೌಹಾರ್ದತೆ, ಭಾವೈಕ್ಯತೆ ಹಾಗೂ ಸಮಾನತೆ ಕಾಣುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮುಳ್ಳುಸೋಗೆಯ ತಪೋವನದ ಕಾರ್ಮೆಲ್ ಮಠದ ಧರ್ಮಗುರುಗಳಾದ ಫಾ. ವಿಲ್ಫ್ರೆಡ್ ರಾಡ್ರಿಗಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಮಠದಲ್ಲಿ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷದ ಪ್ರಯುಕ್ತ ಏರ್ಪಡಿಸಿದ್ದ ಸೌಹಾರ್ದ ಕೂಟದಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ಇತರರನ್ನು ಪ್ರೀತಿ, ವಿಶ್ವಾಸದಿಂದ ಕಾಣುವಂತಾಗಬೇಕು. ಮೋಸ, ವಂಚನೆಯಿಂದ ದೂರ ಇರಬೇಕು. ಪರಸ್ಪರ ಗೌರವದಿಂದ ನಡೆದುಕೊಂಡಲ್ಲಿ ಶಾಂತಿಯ ಜೀವನ ರೂಪುಗೊಳ್ಳಲು ಸಾಧ್ಯ ಎಂದರು. ತಪೋವನ ಕಳೆದ 2 ದಶಕಗಳಿಂದ ಧರ್ಮಗುರುಗಳ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದು, ಪ್ರಸಕ್ತ ಮುಳ್ಳುಸೋಗೆಯಲ್ಲಿ ಕಾವೇರಿ ನದಿ ತಟದಲ್ಲಿ ಸುಸಜ್ಜಿತ ಸಮುದಾಯ ಭವನವೊಂದನ್ನು ನಿರ್ಮಿಸಿದೆ. ಈ ಮೂಲಕ ರಿಯಾಯಿತಿ ದರದಲ್ಲಿ ಸಭಾಂಗಣವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಒದಗಿಸ ಲಾಗುತ್ತಿದೆ. ಇದರ ಪ್ರಯೋಜನವನ್ನು ಪ್ರತಿಯೊಬ್ಬರೂ ಪಡೆಯು ವಂತಾಗಬೇಕು ಎಂದು ಫಾ.ವಿಲ್ಫ್ರೆಡ್ ರಾಡ್ರಿಗಸ್ ಹೇಳಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಕೆ.ಪಿ. ಚಂದ್ರಕಲಾ ಮಾತನಾಡಿ, ಹಬ್ಬ-ಹರಿದಿನಗಳ ಸಂದರ್ಭ ಎಲ್ಲಾ ಸಮುದಾಯ ಬಾಂಧವರು ಒಟ್ಟಾಗಿ ಬೆರೆಯುವ ನಿಟ್ಟಿನಲ್ಲಿ ತಪೋವನದ ಧರ್ಮಗುರುಗಳು ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಫಾ. ಬರ್ಕ್‍ಮನ್ಸ್, ಫಾ. ಜೀವನ್ ತಾವ್ರೊ, ಬ್ರ. ಗ್ರೆಗರಿ ಮೆನೇಜಸ್, ಉದ್ಯಮಿ ಪೊನ್ನಚ್ಚನ ಮೋಹನ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಎಂ.ಎನ್. ಚಂದ್ರಮೋಹನ್, ಉಪನ್ಯಾಸಕರಾದ ಜಾನ್, ಹಂಡ್ರಂಗಿ ನಾಗರಾಜ್, ಜೆಸ್ಸಿ ಮತ್ತಿತರರು ಮಾತನಾಡಿದರು.

ಮುಳ್ಳುಸೋಗೆ, ಗುಮ್ಮನಕೊಲ್ಲಿ ವ್ಯಾಪ್ತಿಯ ನಿವಾಸಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭ ಸಹಭೋಜನ ಏರ್ಪಡಿಸಲಾಗಿತ್ತು.