ಮಡಿಕೇರಿ, ನ. 24: ತಾ. 26 ರಂದು ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕೊಠಡಿ ಮುಂಭಾಗ ದಲ್ಲಿ ವೀರಾಜಪೇಟೆ ತಾಲೂಕು ಯರವ ಒಕ್ಕೂಟದ ಒಂದು ಸಾವಿರ ಯುವಕ ಮತ್ತು ಯುವತಿಯರು ಅರೆ ಬೆತ್ತಲೆ ಉಪವಾಸ ಸತ್ಯಾಗ್ರಹ ನಡೆಸುವದಾಗಿ ಹೇಳಿಕೆಯಿತ್ತಿದ್ದಾರೆ.

ಜಿಲ್ಲೆಯಲ್ಲಿ ತಲ ತಲಾಂತರದಿಂದ ನೆಲೆಸಿರುವ ಪರಿಶಿಷ್ಟ ಪಂಗಡದ ಆದಿವಾಸಿ ಸಮುದಾಯಗಳಾದ ‘ಯರವರು’ ಸ್ವಂತ ಜಮೀನುಗಳಿಲ್ಲದೆ, ಸ್ವಂತ ಮನೆಗಳಿಲ್ಲದೆ ಹಲವಾರು ದಶಕಗಳಿಂದ ಊಳಿಗಮಾನ್ಯ ಜೀವನ ನಡೆಸುತ್ತಿದ್ದರೂ, ಜಿಲ್ಲಾಡಳಿತ ಯರವ ಸಮುದಾಯಕ್ಕೆ ಭೂಮಿ ನೀಡಲು ಮುಂದಾಗದೆ ದಿವ್ಯ ಮೌನವಹಿಸಿರುವದು ವಿಷಾದನೀಯ.

ಯರವ ಯುವ ಒಕ್ಕೂಟವು 2005 ಆಗಸ್ಟ್ 15 ರಿಂದ ನಿರಂತರ ರಾಷ್ಟ್ರೀಯ ಹಬ್ಬಗಳನ್ನು ಕರಾಳ ದಿನವನ್ನಾಗಿ ಆಚರಿಸುತ್ತ 2015ರ ಆಗಸ್ಟ್ 15 ರಂದು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಅರೆಬೆತ್ತಲೆ ಉಪವಾಸ ಸತ್ಯಾಗ್ರಹ ನಡೆಸಿದರ ಫಲವಾಗಿ ತಾ. 30 ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದÀ ಸಭೆಯಲ್ಲಿ ವೀರಾಜಪೇಟೆ ತಾಲೂಕಿನ 5 ಸಾವಿರ ಎಕರೆ ಸರಕಾರಿ ಭೂಮಿ ಗುರುತಿಸಿ ಯರವರಿಗೆ ನೀಡುವಂತೆ ತೀರ್ಮಾನಿಸಲಾಗಿತ್ತು.

ಆದರೆ ಇಲ್ಲಿಯವರೆಗೆ ಜಿಲ್ಲಾಡಳಿತ ಯಾವದೇ ಕ್ರಮಕೈಗೊಂಡಿರುವದಿಲ್ಲ. ಈ ನಿಟ್ಟಿನಲ್ಲಿ ತಾ. 26.1.2017 ರಂದು ಜಿಲ್ಲಾಧಿಕಾರಿಗಳ ಕೊಠಡಿ ಮುಂಭಾಗದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಅನಿರ್ಧಿಷ್ಟಾವಧಿ ಅರೆ ಬೆತ್ತಲೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ಯರವ ಯುವ ಒಕ್ಕೂಟ ತೀರ್ಮಾನಿಸಿರುವದಾಗಿ ಪದಾಧಿಕಾರಿಗಳಾದ ವೈ.ಎಂ. ಸಿದ್ದು, ವೈ.ಎಂ. ಗಣೇಶ್, ಪಿ.ಎಸ್. ಮುತ್ತ ಮೊದಲಾದವರು ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.