ವೀರಾಜಪೇಟೆ, ನ. 24: ಮೂರು ಹೊತ್ತು ಹಸಿವನ್ನು ನೆನೆಪಿಸುತ್ತೇವೆ. ಅದರ ಮೂಲ ಅನ್ನದಾತನನ್ನು ಮರೆಯುತ್ತೇವೆ. ಇಂದು ರಾಜಕಾರಣಿಗಳ ನಿರ್ಲಕ್ಷ್ಯದ ಫಲವಾಗಿ ರೈತ ಕೃಷಿಗಾಗಿ ಪಡೆದ ಸಾಲಕ್ಕಾಗಿ ಪರಿಹಾರವಿಲ್ಲದೆ ಸರಣಿ ಆತ್ಮಹತ್ಯೆಗೆ ತೊಡಗಿರುವದು ಶೋಚನೀಯ. ಮುಖ್ಯಮಂತ್ರಿಯವರು ಕೊಡಗಿಗೆ ಬಂದು ಪರಿಹಾರ ಒದಗಿಸದಿದ್ದರೆ 30 ದಿನಗಳ ಗಡುವು ನೀಡಿ ಸಂಘ ಸಂಸ್ಥೆಗಳು, ಸಾರ್ವಜನಿಕರು, ರೈತರ ಸಹಕಾರದೊಂದಿಗೆ ಜೆಡಿಎಸ್ ಪಕ್ಷದ ಕಾರ್ಯಕರ್ತರು ಉಗ್ರ ಹೋರಾಟ ಹಮ್ಮಿಕೊಳ್ಳಲಿದ್ದಾರೆ ಎಂದು ಪಕ್ಷದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಸಾಲಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿರುವ 1842 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ರೈತರ ಕುಟುಂಬಗಳು ಅನಾಥವಾಗಿವೆ. ಕಲ್ಲು ಹೃದಯ ಹೊಂದಿರುವ ರಾಜ್ಯ ಸರಕಾರದ ನಿರ್ಲಕ್ಷ್ಯಕ್ಕೆ ಕೊಡಗಿನಲ್ಲಿ ಈಗ 6ದಿನಗಳ ಅವಧಿಯಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಅನ್ನದಾತನನ್ನು ಕಳೆದು ಕೊಂಡಂತಾಗಿದೆ. ರಾಜ್ಯ ಸರಕಾರದ ರೈತ ವಿರೋಧಿ ನೀತಿಗೆ ಹಿಡಿದ ಕೈಗನ್ನಡಿಯಾಗಿದೆ. ಮನೆಯ ಯಜಮಾನನ್ನು ಕಳೆದುಕೊಂಡ ಕುಟುಂಬಕ್ಕೆ ಮುಖ್ಯ ಮಂತ್ರಿ ಯಾವ ರೀತಿಯಲ್ಲಿ ಸಾಂತ್ವನ ಹೇಳಬಹುದು. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೇ ಸಾವಿಗೀಡಾಗುತ್ತಿದ್ದರೂ ಮುಖ್ಯಮಂತ್ರಿಯವರ ಮನಸ್ಸು ಕರಗಲಿಲ್ಲ. ರೈತರು ಎಷ್ಟು ಸಂಕಷ್ಟದಲ್ಲಿ ದ್ದಾರೆ ಎಂಬದಕ್ಕೆ ಅನ್ನದಾತನ ಆತ್ಮಹತ್ಯೆ ಉದಾಹರಣೆಯಾಗಿದೆ. ಸಮಯಕ್ಕೆ ಸರಿಯಾಗಿ ಮಳೆ ಬಾರದೆ ರೈತರ ಫಸಲು ಒಣಗುತ್ತಿದೆ. ಮತ್ತೊಂದೆಡೆ ಕಾಡಾನೆಗಳ ಧಾಳಿಯಿಂದ ರೈತನ ಬೆಳೆ ನಾಶವಾಗಿ ಭಯಬೀತನಾಗಿದ್ದಾನೆ. ಸಂಕಷ್ಟದಲ್ಲಿರುವ ರೈತರ ಕುಟುಂಬಕ್ಕೆ ತಕ್ಷಣ ಪರಿಹಾರ ಒದಗಿಸಬೇಕು. ರೈತರ ಕಲ್ಯಾಣಕ್ಕಾಗಿ ಸರಕಾರ ಯೋಜನೆ ಯೊಂದನ್ನು ರೂಪಿಸಿ ಆತ್ಮಹತ್ಯೆ ಮಾಡಿಕೊಂಡ ಕುಟುಂಬಗಳಿಗೆ ಆಸರೆಯಾಗಬೇಕು. ಕಾಡಾನೆ, ಹುಲಿ ಧಾಳಿಯಿಂದ ರೈತರು ಬೆಳೆಗಾರರನ್ನು ರಕ್ಷಿಸುವಂತಾಗಬೇಕು ಎಂದರು.

ಕೊಡಗಿನ ಇತಿಹಾಸದಲ್ಲಿ ಇಂತಹ ಬರದ ಪರಿಸ್ಥಿತಿ ಹಿಂದೆಂದೂ ಬಂದಿರಲಿಲ್ಲ. ಬರಪೀಡಿತ ಪ್ರದೇಶಗಳಿಗೆ ಸರಕಾರ ವೈಮಾನಿಕ ಸಮೀಕ್ಷೆ ನಡೆಸಿ ತಕ್ಷಣ ಪರಿಹಾರ ಒದಗಿಸುವಂತಾಗಲಿ. ಸೋಮವಾರಪೇಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಬೇಕು. ಕೊಡಗಿನ ಉಸ್ತುವಾರಿ ಸಚಿವರು, ಯಾವದೇ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇವರಿಂದ ಕೊಡಗಿಗೆ ಏನು ಪ್ರಯೋಜನವಿಲ್ಲ. ಮಾಜಿ ಸಚಿವ ಜೀವಿಜಯ ಅವರ ಪ್ರಕಾರ ಜನತೆ ಬದಲಾವಣೆಯನ್ನು ಬಯಸಿದ್ದಾರೆ. ಬದಲಾವಣೆ ಖಚಿತ ಎಂದು ಸಂಕೇತ್ ಪೂವಯ್ಯ ಹೇಳಿದರು.

ಗೋಷ್ಠಿಯಲ್ಲಿ ಪಕ್ಷದ ಸ್ಥಳೀಯ ಮುಖಂಡ ಸಿ.ಎ. ನಾಸರ್, ನಗರ ಸಮಿತಿ ಅಧ್ಯಕ್ಷ ಆರ್.ಎ. ಸಕ್ಲೇನ್, ಜಿಲ್ಲಾ ಹಿಂದುಳಿದ ಘಟಕದ ಉಪಾಧ್ಯಕ್ಷ ಎಚ್.ಜಿ. ಗೋಪಾಲ್, ಕುಟ್ಟ ವಿಭಾಗದ ಮುಖಂಡ ಪಿ.ವಿ.ರೆನ್ನಿ ಉಪಸ್ಥಿತರಿದ್ದರು.