ನಾಪೋಕ್ಲು, ನ. 24: ನಾಪೋಕ್ಲುವಿನಿಂದ ಮೂರ್ನಾಡಿಗೆ ಸಾಗುವಾಗ ಸಮೀಪದ ಬೊಳಿಬಾಣೆ ಎಂಬಲ್ಲಿ ಇದೀಗ ಅಡಿಕೆ ಒಣಗಿಸುವ ಕೆಲಸ ನಡೆಯುತ್ತಿದೆ. ಇಲ್ಲಿ ಅಡಿಕೆ ಸಂಸ್ಕರಣೆಯಲ್ಲಿ ನಿರತರಾಗಿರುವವರು ಮಲೆನಾಡಿನಲ್ಲಿರುವಂತೆ ಅಡಿಕೆಯ ಕೊಯ್ಲು ಸಂಸ್ಕರಣೆಯ ಕಾರ್ಯಗಳಲ್ಲಿ ತಲ್ಲೀನರಾಗಿದ್ದಾರೆ. ಉಪ ಬೆಳೆಯಾಗಿ ಅಡಿಕೆಯನ್ನು ರೈತರು ಬೆಳೆಯ ಹೊರಟು ಕೊಯ್ಯಲು ಕಾರ್ಮಿಕರ ಕೊರತೆಯನ್ನು ಎದುರಿಸತೊಡಗಿದಾಗ ಕೆಲವರು ಅಡಿಕೆ ಸಂಸ್ಕರಣೆಗೆ ಒಲವು ತೋರಿದರು.

ತೋಟಗಳಿಂದ ಅಡಿಕೆ ಕೊಯ್ಲು ಮಾಡಿ ಸಂಗ್ರಹಿಸಿ ತಂದು ಸಂಸ್ಕರಿಸುವ ವಿವಿಧ ಕೆಲಸಗಳಿಗೆ ಕಾರ್ಮಿಕರನ್ನು ಒಗ್ಗೂಡಿಸಿ ಕಾರ್ಯ ನಿರತರಾಗಿ ಅಡಿಕೆ ವಹಿವಾಟಿನಲ್ಲಿ ಯಶಸ್ಸು ಕಂಡರು. ಅಂತವರಲ್ಲಿ ಉಸ್ಮಾನ್ ಒಬ್ಬರು. ಮೊದಲು ಕೊಟ್ಟಮುಡಿಯಲ್ಲಿ ಅಡಿಕೆ ಕೆಲಸ ನಡೆಯುತಿತ್ತು. ಈಗ ಬೊಳಿಬಾಣೆಗೆ ಸ್ಥಳಾಂತರಗೊಂಡಿದೆ.

ನಮ್ಮ ರಾಜ್ಯದಲ್ಲಿ ಅಡಿಕೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ದಕ್ಷಿಣ ಕನ್ನಡ, ಶಿವಮೊಗ್ಗ ಪ್ರದೇಶಗಳಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಕೊಡಗು ಜಿಲ್ಲೆಯಲ್ಲೂ ಅಡಿಕೆಯನ್ನು ಬೆಳೆಂiÀiಲಾಗುತ್ತಿದೆ. ನವೆಂಬರ್ ತಿಂಗಳಿನಿಂದ ಅಡಿಕೆ ಕುಯಿಲಿಗೆ ಬರುತ್ತದೆ. ಅಡಿಕೆಯನ್ನು ಸುಲಿಯುವ ಕಾರ್ಮಿಕರು ಅಡಿಕೆಯನ್ನು ಬೇಯಿಸುತ್ತಿರುವವರು ಸುಲಿದ ಕೆಂಪು ಅಡಿಕೆಯನ್ನು ಬಿಸಿಲಿನಲ್ಲಿ ಒಣಗಿಸಿ ಸಂಸ್ಕರಿಸುತ್ತಿರು ವವರು ಹೀಗೆ ಹಲವು ವಿಭಾಗಗಳಲ್ಲಿ ಕಾರ್ಮಿಕರು ಬಿಡುವಿಲ್ಲದ ಕೆಲಸದಲ್ಲಿ ಇಲ್ಲಿ ತೊಡಗಿಸಿಕೊಂಡಿದ್ದಾರೆ.

ತರಿಕೆರೆ, ಕಡೂರುಗಳಿಂದ ಕಾರ್ಮಿಕರು ಇಲ್ಲಿಗೆ ಆಗಮಿಸುತ್ತಾರೆ. ವರ್ಷದ 2 ತಿಂಗಳು ಅಡಿಕೆಯನ್ನು ಸುಲಿಯುವ ಕಾರ್ಮಿಕರಿಗೆ ಬಿಡುವಿಲ್ಲದಷ್ಟು ಕೆಲಸ. ಜಿಲ್ಲೆಯ ವಿವಿಧ ಭಾಗಗಳಿಂದ ಹಸಿ ಅಡಿಕೆಯನ್ನು ಸಂಗ್ರಹಿಸಿ ಇಲ್ಲಿಗೆ ತರಲಾಗುತ್ತದೆ. ಬಳಿಕ ಅನುಭವಿ ಕೆಲಸಗಾರರಿಂದ ಸುಲಿಸಿ-ಬೇಯಿಸಿ, ಸಂಸ್ಕರಿಸಿ ಒಣಗಿಸಲಾಗುತ್ತದೆ. ಬಳಿಕ ಬೇಡಿಕೆ ಇರುವ ಊರುಗಳಿಗೆ ರವಾನಿಸಲಾಗುತ್ತದೆ

- ದುಗ್ಗಳ ಸದಾನಂದ