ಮಡಿಕೇರಿ, ಆ. 20: ಆಧಾರ್ ಜೋಡಣೆಯಾಗದಿರುವ ಪಡಿತರ ಚೀಟಿ ಕುಟುಂಬದವರಿಗಾಗಿ ಆಧಾರ್ ಕಾರ್ಡ್ ನೋಂದಣಿಗೆ ವಿಶೇಷ ಶಿಬಿರ ಆಯೋಜಿಸುವಂತೆ ಮೂರು ತಾಲೂಕಿನ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ನಿರ್ದೇಶನ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೂರಾರು ಪಡಿತರ ಚೀಟಿದಾರರು ಪಡಿತರ ಯೋಜನೆ ಯಡಿ ಆಹಾರ ಪದಾರ್ಥ ದೊರೆಯು ತ್ತಿಲ್ಲ ಎಂದು ಅವಲತ್ತುಕೊಳ್ಳುತ್ತಿದ್ದಾರೆ.

ಆದ್ದರಿಂದ ಆಧಾರ್ ಜೋಡಣೆ ಯಾಗದಿರುವ ಪಡಿತರ ಚೀಟಿದಾರರಿ ಗಾಗಿಯೇ ಮೂರು ತಾಲೂಕು ಕೇಂದ್ರಗಳಲ್ಲಿ ವಿಶೇಷ ಶಿಬಿರ ಹಮ್ಮಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ಪಷ್ಟ ಸೂಚನೆ ನೀಡಿದರು.

ಬಿಪಿಎಲ್‍ನ ಹಲವು ಕುಟುಂಬಗಳ ಪಡಿತರ ಕಾರ್ಡ್‍ಗಳು ಎಪಿಎಲ್ ಆಗಿರುವ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಹಾಗೆಯೇ ಅರ್ಹರಲ್ಲದವರಿಗೆ ಬಿಪಿಎಲ್ ಕಾರ್ಡ್ ನೀಡಲಾಗಿದೆ ಎಂಬ ದೂರುಗಳು ಸಹ ಕೇಳಿ ಬರುತ್ತಿವೆ. ಈ ಸಂಬಂಧ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡುವದು, ಅರ್ಹರಲ್ಲದವರಿಗೆ ಎಪಿಎಲ್ ಕಾರ್ಡ್ ನೀಡುವಂತಾಗಲು ಪತ್ತೆ ಹಚ್ಚುವ ಕಾರ್ಯ ನಡೆಯಬೇಕು. ಆ ನಿಟ್ಟಿನಲ್ಲಿ ಆಹಾರ ಇಲಾಖೆ ಮತ್ತು ತಹಶೀಲ್ದಾರ್ ಕಚೇರಿ ಹಂತದಲ್ಲಿ ಸಮನ್ವಯತೆ ಸಾಧಿಸಿ ಕಾರ್ಯ ನಿರ್ವಹಿಸುವದು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಹೇಳಿದರು.

ಕಡುಬಡವರಿಗೆ ಬಿಪಿಎಲ್ ಕಾರ್ಡ್ ದೊರೆಯಬೇಕು. ಅರ್ಹರಲ್ಲದವರಿಗೆ ಬಿಪಿಎಲ್ ಕಾರ್ಡ್ ನೀಡಿರುವ ಸಂಬಂಧ ಮನವರಿಕೆ ಮಾಡಿ ಎಪಿಎಲ್ ಕಾರ್ಡ್‍ಗೆ ಪರಿವರ್ತನೆಯಾಗಬೇಕು. ಆ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸಲಹೆ ಮಾಡಿದರು.

ಸೀಮೆಎಣ್ಣೆ ವಿತರಣೆ ಸಂಬಂಧ ಕೂಪನ್ ವ್ಯವಸ್ಥೆ ಬಗ್ಗೆ ಸಾರ್ವಜನಿಕ ರಲ್ಲಿ ಜಾಗೃತಿ ಮೂಡಿಸಬೇಕು. ಪಡಿತರ ವಿತರಣೆಯಲ್ಲಿ ಸಾರ್ವಜನಿಕರಿಗೆ ಯಾವದೇ ರೀತಿ ತೊಂದರೆ ಯಾಗದಂತೆ ನೋಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ತಹಶೀಲ್ದಾರರ ಕಚೇರಿ ಹಾಗೂ ಹೋಬಳಿ ಮಟ್ಟದ ನಾಡ ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ಸ್ಪಂದಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಈ ಬಗ್ಗೆ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಅವರು, ಆಧಾರ್ ಕಾರ್ಡ್ ಪಡೆಯದಿರುವವರಿಗೆ ಪಡಿತರ ವಿತರಿಸಲು ಅಗತ್ಯ ಕ್ರಮವಹಿಸಬೇಕು. ಯಾವದೇ ಕಾರಣಕ್ಕೂ ರೇಷನ್ ಸ್ಥಗಿತಗೊಳಿಸಬಾರದು ಎಂದು ಸಲಹೆ ಮಾಡಿದರು.

ಜಿಲ್ಲೆಯಲ್ಲಿ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಒಟ್ಟು 92,624 ಪಡಿತರ ಚೀಟಿದಾರರು ಇದ್ದು, ಈ ಪೈಕಿ 89,759 ಪಡಿತರ ಕಾರ್ಡ್‍ಗಳಿಗೆ ಆಧಾರ್ ಜೋಡಣೆ ಯಾಗಿದೆ. ಉಳಿದ 2,855 ಪಡಿತರ ಚೀಟಿಗಳಿಗೆ ಆಧಾರ್ ಜೋಡಣೆ ಯಾಗಬೇಕಿದೆ. ಆಧಾರ್ ಸಂಖ್ಯೆ ನೀಡದಿರುವ ಸುಮಾರು 6,302 ಪಡಿತರ ಚೀಟಿಗಳು ಅಮಾನತು ಗೊಂಡಿವೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ್ ನಾಯಕ್ ಮಾಹಿತಿ ನೀಡಿದರು.

ಕಳೆದ ವರ್ಷ ಸುಮಾರು 3,072 ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್‍ಗಳನ್ನು ಅರ್ಹವಲ್ಲ ಎಂದು ಗುರುತಿಸಿ ಎಪಿಎಲ್‍ಗೆ ಪರಿವರ್ತಿಸ ಲಾಗಿದೆ. ಸದ್ಯ 1,015 ಅರ್ಹರಲ್ಲದವರನ್ನು ಪತ್ತೆ ಹಚ್ಚಬೇಕಿದೆ. ಈ ಪೈಕಿ 696 ಕಾರ್ಡ್‍ಗಳನ್ನು ಪತ್ತೆ ಹಚ್ಚಿ ಎಪಿಎಲ್ ಕಾರ್ಡ್‍ಗೆ ಪರಿವರ್ತನೆ ಗೊಂಡಿದೆ.

ಒಟ್ಟಾರೆ ಪಡಿತರದಾರರು ಆಹಾರ ಪದಾರ್ಥ ಪಡೆಯುವಂತಾಗಲು ಆಧಾರ್ ಸಂಖ್ಯೆ ಪಡೆಯುವದು ಕಡ್ಡಾಯವಾಗಿದೆ ಎಂದು ಆಹಾರ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.

ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಅವರು ಪಡಿತರ ಚೀಟಿದಾರರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸೋಮವಾರ ಸೋಮವಾರಪೇಟೆಗೆ, ಬುಧವಾರ ವೀರಾಜಪೇಟೆಗೆ ಹಾಗೂ ಶುಕ್ರವಾರ ಮಡಿಕೇರಿ ತಹಶೀಲ್ದಾರರ ಕಚೇರಿಗೆ ತೆರಳಿ ಸಾರ್ವಜನಿಕರ ಕುಂದುಕೊರತೆ ಆಲಿಸುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸಲಹೆ ಮಾಡಿದರು.

ಜಿಲ್ಲೆಯಲ್ಲಿ ನಿವೇಶನ ರಹಿತರ ಸಂಖ್ಯೆಯನ್ನು ಗ್ರಾಮ ಪಂಚಾಯತ್ ವಾರು ನಿಖರ ಮಾಹಿತಿ ಒದಗಿಸು ವಂತೆ ತಾ.ಪಂ. ಇಒಗಳಿಗೆ ಜಿಲ್ಲಾಧಿಕಾರಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಲ್ಲೆಯಲ್ಲಿ ನಿವೇಶನ ರಹಿತ ಕುಟುಂಬಗಳ ನಿಖರ ಮಾಹಿತಿಯನ್ನು ಕೂಡಲೇ ಒದಗಿಸಬೇಕು. ಈಗಾಗಲೇ ಕೊಟ್ಟಿರುವ ಭೂಮಿಯನ್ನು ಸಂರಕ್ಷಣೆ ಮಾಡಿಕೊಳ್ಳುವದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ, ಘನ ತ್ಯಾಜ್ಯ ವಿಲೇವಾರಿ ಹಾಗೂ ಸ್ಮಶಾನ ಭೂಮಿ ಹಂಚಿಕೆ ಸಂಬಂಧ ಹಿಂದಿನಿಂದಲೂ ಚರ್ಚೆ ಮಾಡಿ ಕೊಂಡು ಬರಲಾಗಿದೆ. ಆದರೆ ಈಗಾಗಲೇ ಪಂಚಾಯಿತಿ ವಶಕ್ಕೆ ನೀಡಲಾಗಿರುವ ಭೂಮಿಯನ್ನು ಸಂರಕ್ಷಣೆ ಮಾಡಿಕೊಂಡಿಲ್ಲ ಎಂಬದು ಸಭೆಯಲ್ಲಿ ಕೇಳಿಬಂದಿತು.

ನಿವೇಶನ ರಹಿತರಿಗೆ ನಿವೇಶನ ಒದಗಿಸದಿದ್ದರೆ ಸಾರ್ವಜನಿಕರು ಧರಣಿ, ಸತ್ಯಾಗ್ರಹಕ್ಕೆ ಮುಂದಾಗುತ್ತಾರೆ. ಇದನ್ನು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅರ್ಥ ಮಾಡಿಕೊಂಡು ಸಾರ್ವಜನಿಕರ ಒಳಿತಿಗಾಗಿ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು. ಆದ್ದರಿಂದ ಒಂದು ತಿಂಗಳಲ್ಲಿ ಪರಿಷ್ಕøತ ನಿವೇಶನ ಪಟ್ಟಿಯನ್ನು ಗ್ರಾ.ಪಂ.ವಾರು ಒದಗಿಸುವಂತೆ ಸಂಬಂಧಪಟ್ಟ ತಾ.ಪಂ. ಇಓಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಸ್ಪಷ್ಟ ನಿರ್ದೇಶನ ನೀಡಿದರು.

ವೀರಾಜಪೇಟೆ ತಾ.ಪಂ. ಇಒ ಫಡ್ನೇಕರ್ ಮಾತನಾಡಿ, ವೀರಾಜಪೇಟೆ ತಾಲೂಕಿನ 38 ಗ್ರಾ.ಪಂ.ಗಳಲ್ಲಿ 1,449 ನಿವೇಶನ ರಹಿತ ಕುಟುಂಬಗಳಿವೆ. ಇವುಗಳಿಗೆ ನಿವೇಶನ ಒದಗಿಸಬೇಕಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಗಿರಿಜನರಿಗೆ ಪುನರ್ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅರಣ್ಯದ ಸಮೀಪ ಭೂಮಿಯನ್ನು ಗುರುತಿಸುವದು, ಗುರುತಿಸಿದ ಸ್ಥಳದಲ್ಲಿ ಕೂಲಿ ಕೆಲಸಕ್ಕಾಗಿ ಅನುಕೂಲ ಗಮನಿಸುವದು. ಹಾಗೆಯೇ ಭೂಮಿ ಕೃಷಿಗೆ ಯೋಗ್ಯವಾಗಿರಬೇಕು. ಈ ಮೂರು ಮಾನದಂಡಗಳನ್ನು ನೋಡಿ ಭೂಮಿ ಕಾಯ್ದಿರಿಸುವಂತೆ ತಹಶೀಲ್ದಾರರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಸೂಚನೆ ನೀಡಿದರು.

ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಮಳೆ, ಬಿಸಿಲಿನಲ್ಲಿ ನಿಲ್ಲುತ್ತಾರೆ. ಕೂಡಲೇ ಶೆಲ್ಟರ್ ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳು ವಂತೆ ತಾ.ಪಂ. ಇಒಗೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು.

ಕೆ.ಎಸ್.ಆರ್.ಟಿ.ಸಿ. ಮತ್ತು ಖಾಸಗಿ ಬಸ್‍ಗಳು ವ್ಯವಸ್ಥಿತವಾಗಿ ಬಸ್ ನಿಲುಗಡೆ ಮಾಡಬೇಕು. ಬಸ್ ನಿಲ್ದಾಣದಲ್ಲಿ ಗುಂಡಿಗಳನ್ನು ಮುಚ್ಚುವಂತಾಗಲು ಅಗತ್ಯ ಕ್ರಮಕೈಗೊಳ್ಳುವಂತೆ ತಾ.ಪಂ. ಇಓಗೆ ನಿರ್ದೇಶನ ನೀಡಿದರು.

ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಶೆಲ್ಟರ್ ಹಾಗೂ ಶೌಚಾಲಯ ನಿರ್ಮಾಣ ಸಂಬಂಧ ಗ್ರಾಮ ಸಭೆಯಲ್ಲಿ ತೀರ್ಮಾನಿಸಿ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಪಿಡಿಓಗೆ ತಿಳಿಸಲಾಗುವದು ಎಂದು ಪಡ್ನೇಕರ್ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ಅವರು ನಡೆಸುವ ಹೋಬಳಿ ಮಟ್ಟದ ಜನಸಂಪರ್ಕ ಸಭೆಗೆ ತಾ.ಪಂ. ಇಓಗಳು ಹಾಜರಾಗ ಬೇಕು. ಇಲ್ಲದಿದ್ದಲ್ಲಿ ಪಿಡಿಓಗಳನ್ನು ಕಳುಹಿಸಬೇಕು. ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕ ಕುಂದು ಕೊರತೆ ಸಂಬಂಧಿಸಿದಂತೆ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯ ಹಲವು ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವರು ಹೇಳಿದರು.

ಜಿಲ್ಲೆಯ ಹೋಬಳಿ ಮಟ್ಟದ ಹಲವು ರೈತರ ಸಂಪರ್ಕ ಕೇಂದ್ರಗಳ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಲಾಯಿತು.

ಕೃಷಿ ಇಲಾಖೆಗೆ ಸಂಬಂಧಿಸಿ ದಂತೆ ಜಂಟಿ ನಿರ್ದೇಶಕ ರಾಮಪ್ಪ ಹಾಗೂ ಪಶುಪಾಲನೆ ಇಲಾಖೆ ಕಾರ್ಯಕ್ರಮಗಳ ಸಂಬಂಧ ಉಪ ನಿರ್ದೇಶಕ ಡಾ. ನಾಗರಾಜು ಮಾಹಿತಿ ಪಡೆದರು.

ತಹಶೀಲ್ದಾರರಾದ ಮಹದೇವ ಸ್ವಾಮಿ (ವೀರಾಜಪೇಟೆ), ಶಿವಪ್ಪ (ಸೋಮವಾರಪೇಟೆ) ಅವರು ಪಡಿತರ ಚೀಟಿ, ನಿವೇಶನ, ಖಾಲಿ ನಿವೇಶನ ಗುರುತಿಸುವದು ಮತ್ತಿತರ ಸಂಬಂಧ ಹಲವು ಮಾಹಿತಿ ನೀಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತಾ.ಪಂ. ಇಓಗಳಾದ ಚಂದ್ರಶೇಖರ್, ಜೀವನ್, ನಗರಸಭೆ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆ.ಎಂ. ರವಿಕುಮಾರ್, ಕಂದಾಯ ನಿರೀಕ್ಷಕರು ಮತ್ತಿತರರು ಹಲವು ಮಾಹಿತಿಯನ್ನು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೆದಾರ ಪ್ರವೀಣ್ ಕುಮಾರ್, ಪ್ರಕಾಶ್, ಭಾಗ್ಯಲಕ್ಷ್ಮಿ, ಶ್ರೀಶಾ ಇದ್ದರು.