ಮಡಿಕೇರಿ, ಆ. 20: ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿ, ಶ್ರೀ ಮಾನಿಲ್ ಅಯ್ಯಪ್ಪ ಯುವಕ ಸಂಘ ಮತ್ತು ಮಾಯಮುಡಿಯ ದೊಡ್ಡಮಾಡ್ ಕೊಡವ ಕೂಟದ ಸಂಯುಕ್ತ ಆಶ್ರಯದಲ್ಲಿ ಕೈಲ್ ಮುಹೂರ್ತ ಹಬ್ಬದ ಅಂಗವಾಗಿ 5ನೇ ವರ್ಷದ ವಾಲಿಬಾಲ್ ಪಂದ್ಯಾಟ ಸೆ. 9 ರಿಂದ 11 ರವರೆಗೆ ನಡೆಯಲಿದೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಶ್ರೀ ಮಾನಿಲ್ ಅಯ್ಯಪ್ಪ ಸೇವಾ ಸಮಿತಿಯ ಗೌರವ ಅಧ್ಯಕ್ಷ ಸಣ್ಣುವಂಡ ರಮೇಶ್, ಮೂರು ದಿನಗಳ ಕಾಲ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.

ಮಾಯಮುಡಿಯ ಶ್ರೀ ಮಾನಿಲ್ ಅಯ್ಯಪ್ಪ ಮೈದಾನದಲ್ಲಿ ಕೊಡವ ಮತ್ತು ಅಮ್ಮ ಕೊಡವ ಕುಟುಂಬಗಳಿಗಾಗಿ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಸೆ. 11 ರಂದು ಅಂತಿಮ ಪಂದ್ಯಾವಳಿಗೂ ಮೊದಲು ವಾಲಗ ತಾಟ್ ಮತ್ತು ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನದ ನಂತರ ಅಂತಿಮ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು, ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವದು. ವಾಲಿಬಾಲ್ ಪಂದ್ಯಾಟದಲ್ಲಿ ಒಂದು ತಂಡದಲ್ಲಿ ಆರು ಆಟಗಾರರಿದ್ದು, ಟೆನ್ನಿಸ್ ಪಾಯಿಂಟ್ ಆಧಾರದಲ್ಲಿ ಪಂದ್ಯ ನಡೆಯಲಿದೆ.

ಕಳೆದ ವರ್ಷ 28 ಕುಟುಂಬಗಳು ಭಾಗವಹಿಸಿದ್ದು, ಈ ಬಾರಿ 5 ಹೆಚ್ಚು ಕುಟುಂಬಗಳನ್ನು ನಿರೀಕ್ಷಿಸಲಾಗಿದೆ ಎಂದು ಸಣ್ಣುವಂಡ ರಮೇಶ್ ತಿಳಿಸಿದರು. ಪಂದ್ಯಾಟದ ಉದ್ಘಾಟನೆ ಮತ್ತು ಸಮಾರೋಪದ ದಿನದಂದು ಕೊಡಗಿನ ಜಾನಪದ ನೃತ್ಯ ಪ್ರದರ್ಶನವಿರುತ್ತದೆ. ಸೆ. 11 ರಂದು ಕೈಲ್ ಮುಹೂರ್ತ ಹಬ್ಬದ ವಿಶಿಷ್ಟ ಖಾದ್ಯಗಳೊಂದಿಗೆ ಉಟೋಪಚಾರ ಇರುತ್ತದೆ ಎಂದು ರಮೇಶ್ ತಿಳಿಸಿದರು. ಪಂದ್ಯಾಟದಲ್ಲಿ ಪಾಲ್ಗೊಳ್ಳುವ ತಂಡಗಳು ಹೆಸರು ನೋಂದಾಯಿಸಿಕೊಳ್ಳಲು ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. 9449072842, 8762515797, 9902612333.

ಗೋಷ್ಠಿಯಲ್ಲಿ ಪ್ರಮುಖರಾದ ಆಪಟ್ಟಿರ ಬೋಪಣ್ಣ, ಬಲ್ಯಂಡ ಪ್ರತಾಪ್, ಹಾಗೂ ಸಣ್ಣುವಂಡ ಅಯ್ಯಪ್ಪ ಉಪಸ್ಥಿತರಿದ್ದರು.