ಮಡಿಕೇರಿ, ಆ. 20 : ಕಾರ್ಮಿಕ ವರ್ಗದ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ದೇಶವ್ಯಾಪಿ ಸೆ.2 ರಂದು ಹಮ್ಮಿಕೊಂಡಿರುವ ಅಖಿಲ ಭಾರತ ಮುಷ್ಕರಕ್ಕೆ ಗ್ರಾ.ಪಂ. ನೌಕರರ ಸಂಘ ಬೆಂಬಲ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಸೆ. 2 ರಂದು ಜಿಲ್ಲೆಯ ಗ್ರಾ.ಪಂ. ನೌಕರರು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದÀರು. ಪ್ರತಿಭಟನೆ ಸಂದರ್ಭ ಬೆಲೆ ಏರಿಕೆ ನಿಯಂತ್ರಣ ಮತ್ತು ಕನಿಷ್ಟ ವೇತನಕ್ಕಾಗಿ ಒತ್ತಾಯಿಸುವದಾಗಿ ಅವರು ಹೇಳಿದರು.

ದೇಶವ್ಯಾಪಿ ಮುಷ್ಕರದ ಹಿನ್ನೆಲೆ ಪೂರ್ವಭಾವಿಯಾಗಿ ಗ್ರಾ.ಪಂ. ನೌಕರರ ಜಿಲ್ಲಾ ಸಮಿತಿ ವತಿಯಿಂದ ಆ. 21 ರಂದು ಸುಂಟಿಕೊಪ್ಪದಿಂದ ಮಡಿಕೇರಿವರೆಗೆ ದ್ವಿಚಕ್ರ ವಾಹನ ಜಾಥಾ ನಡೆಯಲಿದೆ ಎಂದು ಭರತ್ ತಿಳಿಸಿದರು. ನೌಕರರಿಗೆ ಕನಿಷ್ಟ ವೇತನ 15 ಸಾವಿರ ರೂ. ನೀಡುವದಾಗಿ ಘೋಷಣೆ ಮಾಡಿದ ಸರಕಾರ ಇದೀಗ ಕೇವಲ 12 ಸಾವಿರ ರೂ. ಗಳನ್ನು ನೀಡುತ್ತಿದೆ. ಬಲಗೈಯಲ್ಲಿ ವೇತನ ನೀಡಿ ಎಡಗೈಯಲ್ಲಿ ಕಸಿದುಕೊಳ್ಳುವ ಪ್ರವೃತ್ತಿಯನ್ನು ಸರಕಾರ ಅನುಸರಿಸುತ್ತಿದೆ ಎಂದು ಆರೋಪಿಸಿದ ಅವರು ಅಲ್ಪ ಪ್ರಮಾಣದ ವೇತನ ಕೂಡ ಸಕಾಲದಲ್ಲಿ ದೊರೆಯುತ್ತಿಲ್ಲ ಎಂದು ಟೀಕಿಸಿದರು.

ಗ್ರಾ.ಪಂ.ಯಲ್ಲಿ ಖಾಲಿ ಇರುವ ಲೆಕ್ಕ ಸಹಾಯಕರು ಹಾಗೂ ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ. ಕೆಲವೇ ಮಂದಿ ನೌಕರರ ಮೇಲೆ ಕೆಲಸದ ಒತ್ತಡವನ್ನು ಹೇರಲಾಗುತ್ತಿದೆ ಎಂದು ಭರತ್ ಅಸಮಾಧಾನ ವ್ಯಕ್ತಪಡಿಸಿದರು. ಸೆ. 2 ರಂದು ನಡೆಯುವ ಮುಷ್ಕರದ ಸಂದರ್ಭ ಗ್ರಾ.ಪಂ. ನೌಕರರಿಂದಲೂ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸುವದಾಗಿ ಭರತ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಸಿ.ಆರ್. ರವಿ, ಹಾಗೂ ಉಪಾಧ್ಯಕ್ಷ ಕೆ.ಎಲ್. ಚೆನ್ನಪ್ಪ ಉಪಸ್ಥಿತರಿದ್ದರು.