ಮಡಿಕೇರಿ, ಡಿ. 13: ಗೌಡ ಜನಾಂಗ ಬಾಂಧವರು ಯಾವದರಲ್ಲೂ ಕಡಿಮೆ ಇಲ್ಲ; ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ. ಆದರೆ, ವಿದ್ಯಾವಂತರ ಸಂಖ್ಯೆ ಕಡಿಮೆ ಇದ್ದು, ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ನಿವೃತ್ತ ಪ್ರಾಂಶುಪಾಲೆ ನಿಡ್ಯಮಲೆ ದೇವಕಿ ಹೇಳಿದರು.

ಇಲ್ಲಿನ ಕೊಡಗು ಗೌಡ ವಿದ್ಯಾ ಸಂಘ ಸಭಾಂಗಣದಲ್ಲಿ ನಡೆದ ಚೌಡೇಶ್ವರಿ ಗೌಡ ಒಕ್ಕೂಟದ ಸಂತೋಷ ಕೂಟ ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆಗಳು, ಒಕ್ಕೂಟಗಳು ಜನಾಂಗವನ್ನು ಅಭಿವೃದ್ಧಿ ಕಡೆಗೆ ಕೊಂಡೊಯ್ಯಬೇಕು. ಒಕ್ಕೂಟದ ಸ್ಥಾಪನೆಯ ಉದ್ದೇಶ ಈಡೇರುವಂತಾಗಬೇಕು, ಆದರೆ ಅದು ಆಗುತ್ತಿಲ್ಲ. ಪರಸ್ಪರ ಕಷ್ಟ-ಸುಖದಲ್ಲಿ ಭಾಗಿಗಳಾಗಬೇಕು. ಮಕ್ಕಳಿಗೆ ಪ್ರೋತ್ಸಾಹ ನೀಡಬೇಕೆಂದರು. ಜಾಗತೀಕರಣ, ಔದ್ಯೋಗಿಕರಣದಲ್ಲಿ ನಾವುಗಳು ಬಹಳ ಹಿಂದೆ ಇದ್ದೇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಕುದುಪಜೆ ಆನಂದ ಅವರು ಮಾತನಾಡಿ, ಜನಾಂಗದ ಮಕ್ಕಳಿಗೆ ಪ್ರೋತ್ಸಾಹ ನೀಡಬೇಕು. ಎಲ್ಲರು ಒಗ್ಗಟ್ಟಾಗಿ ಸೇರಿಕೊಂಡು ಮುಂದು ವರಿಯಬೇಕೆಂದು ಹೇಳಿದರು. ಸಂಘದ ಸದಸ್ಯರುಗಳು ನೀಡಿದ ಸಲಹೆಯ ಬಗ್ಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಾಗುವದೆಂದು ಹೇಳಿದರು. ಸಂಘದ ಮಾಜಿ ಅಧ್ಯಕ್ಷ ಪೊನ್ನಚನ ಸೋಮಣ್ಣ, ಕೂಡಕಂಡಿ ದಯಾನಂದ, ಡಾ. ಕೀಲಾರ್ ಸೂರ್ಯಕುಮಾರ್, ಕೋಡಿ ಚಂದ್ರಶೇಖರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಕಿ ಪುದಿಯನೆರವನ ರೇವತಿ ರಮೇಶ್ ನಿರೂಪಿಸಿದರೆ, ಕೂಡಕಂಡಿ ದಯಾನಂದ ಸ್ವಾಗತಿಸಿದರು. ಇದೇ ಸಂದರ್ಭ ಒಕ್ಕೂಟದ ಸದಸ್ಯರು, ಮಕ್ಕಳಿಗೆ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಮನರಂಜಿಸಿದವು.