ಶನಿವಾರಸಂತೆ, ಜು. 25: ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ರುವದರ ಬಗ್ಗೆ ಹಾಗೂ ಗುಜರಾತಿನಲ್ಲಿ ದಲಿತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕೊಡ್ಲಿಪೇಟೆಯಲ್ಲಿ ಬಹುಜನ ಸಮಾಜ ಪಾರ್ಟಿ ಮತ್ತು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ಉತ್ತರ ಪ್ರದೇಶದ ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರ ಪ್ರತಿಕೃತಿಯನ್ನು ದಹಿಸಲಾಯಿತು.

ಕೊಡ್ಲಿಪೇಟೆಯ ಕಡೆಪೇಟೆಯ ಗಣಪತಿ ದೇವಾಲಯದಿಂದ ಪ್ರತಿಭಟನೆ ಮೆರವಣಿಗೆಯಲ್ಲಿ ಉತ್ತರ ಪ್ರದೇಶದ ರಾಜ್ಯ ಬಿಜೆಪಿ ಪಕ್ಷದ ಉಪಾಧ್ಯಕ್ಷ ದಯಾಶಂಕರ್ ಸಿಂಗ್ ಅವರ ಪ್ರತಿಕೃತಿಯನ್ನು ಚಟ್ಟಿಕಟ್ಟಿ ಹೊತ್ತು ಸಾಗಿ ಕೇಂದ್ರ ಬಿಜೆಪಿ aಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಸ್ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಕೃತಿಯನ್ನು ದಹಿಸಿದರು.

ಸಭೆಯನ್ನು ಉದ್ದೇಶಿಸಿ ಬಹುಜನ ವಿದ್ಯಾರ್ಥಿ ಸಂಘದ ಮುಖಂಡ ಮೋಹನ್ ಮೌರ್ಯ ಮಾತನಾಡಿ, ಉತ್ತರಪ್ರದೇಶದಲ್ಲಿ ಆರ್‍ಎಸ್‍ಎಸ್ ಗೂಂಡಾಗಳು ದಲಿತರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. 2-3 ದಿನಗಳ ಹಿಂದೆ ಬಿಜೆಪಿ ಪಕ್ಷದ ಉಪಾಧ್ಯಕ್ಷ ದಯಾಶಂಕರ ಸಿಂಗ್ ಅವರು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರನ್ನು ಉದ್ದೇಶಿಸಿ ಅತ್ಯಂತ ಕೀಳು ಮಟ್ಟದ ಪದವನ್ನು ಉಪಯೋಗಿಸಿ ಆಕೆ ವೇಶ್ಯೆ ಎನ್ನುವ ಮಟ್ಟಕ್ಕೆ ಬಿಂಬಿಸಿದ್ದಾರೆ. ಬಿಜೆಪಿ ಸರಕಾರಕ್ಕೆ ಕಣ್ಣು ಕಾಣಲ್ಲ, ಕಿವಿಯು ಕೇಳಿಸಲ್ಲ, ಕೇಂದ್ರ ಸರಕಾರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಹಿಡಿತವಿಲ್ಲ. ಈ ದೇಶದಲ್ಲಿ 1ಕೋಟಿ 8ಲಕ್ಷ ಮಂದಿ ದಲಿತರಿದ್ದಾರೆ. ಅವರು ಎಚ್ಚೆತ್ತು ಕೊಳ್ಳದಿದ್ದರೆ, ಆಳುವ ವರ್ಗ ನಮ್ಮನ್ನು ಮುಗಿಸುತ್ತವೆ ಎಂದರು.

ದಲಿತ ಮುಖಂಡ ಡಿ.ಸಿ. ನಿರ್ವಾಣಪ್ಪ ಮಾತನಾಡಿ, ಈ ದೇಶದಲ್ಲಿ ಶತಮಾನಗಳಿಂದಲೂ ದಲಿತರ ಮೇಲೆ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಅವಮಾನ, ಹಸಿವು, ಬಡತನಕ್ಕೆ ಕಾರಣರಾದವರು ಸಾಮಾನ್ಯ ವ್ಯಕ್ತಿಗಳಲ್ಲ ಅವರ ವಿರುದ್ಧವಾಗಿಯೇ ಈ ಪ್ರತಿಭಟನೆ ಎಂದರು. ಪ್ರತಿಭಟನೆಯಲ್ಲಿ ಡಿ.ವಿ. ಜಗದೀಶ್, ಡಿ.ಆರ್. ವೇದಕುಮಾರ್, ವೀರಭದ್ರ, ವಿಜಯ, ವಸಂತ, ಕೂಡ್ಲೂರು ದೇವರಾಜ್, ಪ್ರಸನ್ನ, ಜಯರಾಜ್, ಕೆಂಚಯ್ಯ ಇತರರಿದ್ದರು. ಠಾಣಾಧಿಕಾರಿ ಮರಿಸ್ವಾಮಿ ಸೂಕ್ತ ಬಂದೋಬಸ್ತ್ ಏರ್ಪಡಿಸಿದ್ದರು.