ಶನಿವಾರಸಂತೆ, ಜು. 25: ಆಲೂರು ಸಿದ್ದಾಪುರ ಗ್ರಾಮದ ಮುಖ್ಯರಸ್ತೆಯಲ್ಲಿ ಜಾನುವಾರುಗಳನ್ನು (ಕೆ.ಎ. 12 ಬಿ. 2298) ಅಶೋಕ್ ಲೈಲ್ಯಾಂಡ್ ಪಿಕ್‍ಅಪ್ ವಾಹನದಲ್ಲಿ ತುಂಬಿಸಿಕೊಂಡು ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಆರೋಪಿ ಗಳನ್ನು ಆಲೂರು ಸಿದ್ದಾಪುರ ಗ್ರಾಮದ ಗ್ರಾಮಸ್ಥರು ಹಿಡಿದು ವಾಹನ ಮತ್ತು ಜಾನುವಾರುಗಳನ್ನು ಪೊಲೀಸರಿಗೆ ಒಪ್ಪಿಸಿದ ಪ್ರಕರಣ ನಡೆದಿದೆ.

ಸರಕಾರದ ಪರವಾನಿಗೆ ಇಲ್ಲದೆ ಸುಬ್ರಮಣ್ಯ ಸಮೀಪದ ಗುಂಡ್ಯ ಗ್ರಾಮ ದಿಂದ ತಾ. 22ರಂದು ಜಾನುವಾರು ಗಳನ್ನು ಕಸಾಯಿಖಾನೆಗೆ ಮಾರಾಟ ಮಾಡಲು 6 ಜಾನುವಾರುಗಳನ್ನು ರೂ. 30ಸಾವಿರಗಳಿಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಹೆಬ್ಬಾಲೆ ಗ್ರಾಮಕ್ಕೆ ಸಾಗಿಸುತ್ತಿರುವಾಗ, ವಾಹನದೊಳಗೆ ಕಟ್ಟಿ ಹಾಕಿದ ಹಸುವೊಂದು ವಾಹನದಿಂದ ಕೆಳಗೆ ಬಿದ್ದು, ವಾಹನದೊಂದಿಗೆ ರಸ್ತೆಯಲ್ಲಿ ಎಳೆಯಲ್ಪಟ್ಟು, ಎರಡು ಪಕ್ಕೆಗಳು ಗಾಯಗೊಂಡು ರಸ್ತಸ್ರಾವದಿಂದ ಒದ್ದಾಡುತ್ತಿತ್ತು. ಇದನ್ನು ನೋಡಿದ ಸಾರ್ವಜನಿಕರು ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ಚಾಲಕನಿಗೆ ಧರ್ಮದೇಟು ನೀಡಿದಾಗ ಚಾಲಕ ಪರಾರಿಯಾಗಿದ್ದಾನೆ.

ಶನಿವಾರಸಂತೆ ಪೊಲೀಸರಿಗೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ, ವಾಹನ, 5 ಜಾನುವಾರುಗಳು ಹಾಗೂ ಆರೋಪಿಗಳಾದ ವಾಹನದ ಮಾಲೀಕ, ಹೆಬ್ಬಾಲೆ ಗ್ರಾಮದ ಹಳೆಗೋಟೆಯ ನಾಗೇಶ್ ಮತ್ತು ಚಿಕ್ಕಅಳುವಾರು ಗ್ರಾಮದ ಎ.ಎಲ್. ಚಂದ್ರ ಅವರುಗಳನ್ನು ವಶಪಡಿಸಿ ಕೊಂಡು ಜಾನುವಾರುಗಳನ್ನು ಕ್ರೂರ ರೀತಿಯಲ್ಲಿ ಜಾನುವಾರುಗಳಿಗೆ ಹಿಂಸೆ ಯಾಗುವ ರೂಪದಲ್ಲಿ ತುಂಬಿಸಿ ಕೊಂಡು ಕಸಾಯಿಖಾನೆಗೆ ಮಾರಾಟ ಮಾಡಲು ಸಾಗಿಸುತ್ತಿರುವರು ಎಂಬದಾಗಿ ವಿಧಿ 4,5,8,9,11 ಕರ್ನಾಟಕ ಗೋಹತ್ಯಾ ನಿಷೇಧ ಕಾಯ್ದೆ ಮತ್ತು ಜಾನುವಾರುಗಳ ಪರೀರಕ್ಷಣಾ ಅಧಿನಿಯಮದ ಅನ್ವಯ ಪ್ರಕರಣ ದಾಖಲಿಸಿದ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಹೆಚ್.ಎಂ. ಗೋವಿಂದ್ ಅವರು 5 ಜಾನುವಾರುಗಳನ್ನು ಮೈಸೂರಿನ ಪಿಂಜರ್ ಪೋಲ್‍ಗೆ (ಗೋ ಸಂರಕ್ಷಣಾ ಶಾಲೆ) ಕಳುಹಿಸಿ, ಆರೋಪಿಗಳಾದ ನಾಗೇಶ್ ಮತ್ತು ಚಂದ್ರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಇನ್ನೋರ್ವ ಆರೋಪಿ ಚಾಲಕ ಬೈರಪ್ಪನಗುಡಿ ಗ್ರಾಮದ ಮಂಜುನಾಥ್ ತಲೆಮರೆಸಿ ಕೊಂಡಿದ್ದಾನೆ. ರಕ್ತ ಸ್ರಾವದಿಂದ ಒದ್ದಾಡುತ್ತಿದ್ದ ಹಸು ಮೃತಪಟ್ಟಿದೆ.